ಸಿಂದಗಿ: ಕೆರೆಯ ಪಕ್ಕದ ಶಾಂತವೀರ ಪಟ್ಟಾಧ್ಯಕ್ಷರ ಉದ್ಯಾನವನದಲ್ಲಿ ತೊಂಟದ ಲಿಂ.ಸಿದ್ದಲಿಂಗ ಶ್ರೀಗಳ ಮೂರ್ತಿ ಪ್ರತಿಷ್ಟಾಪನೆ ಮಾಡಿದರೆ ಇಲ್ಲಿನ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಸಿಂದಗಿ ಪಟ್ಟಣದಲ್ಲಿ ಜಿಲ್ಲಾ ಪಂಚಾಯತ್, ಪಂಚಾಯತ್ ರಾಜ ಇಂಜಿನಿಯರ್ ಉಪ ವಿಭಾಗ ಇಲಾಖೆಯ ೨೦೨೪-೨೫ನೇ ಸಾಲಿನ ಮಳೆ ಪರಿಹಾರದ ಕಾರ್ಯಕ್ರಮದಡಿಯಲ್ಲಿ ರೂ.೧ಕೋಟಿ ವೆಚ್ಚದ ವಿಜಯಪುರ ಜಿಲ್ಲೆಯ ಸಿಂದಗಿ ಮತಕ್ಷೇತ್ರದ ಹಳೆ ಬ್ಯಾಕೋಡ-ಸಿಂದಗಿ ಕೂಡುವ ರಸ್ತೆ ಡಾಂಬರಿಕರಣ ಹಾಗೂ ಸಿಸಿ ಚರಂಡಿ ಸೇತುವೆ ನಿರ್ಮಾಣ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು, ಸಾರ್ವಜನಿಕರ ಓಡಾಟಕ್ಕೆ ಹಳೆಯ ರಸ್ತೆಗಳು ಬಹಳಷ್ಟು ಅನುಕೂಲವಾಗುತ್ತವೆ. ಆ ನಿಟ್ಟಿನಲ್ಲಿ ಅವುಗಳನ್ನು ಅಭಿವೃದ್ಧಿ ಮಾಡುವ ಕಾರ್ಯಕ್ಕೆ ಮುಂದಾಗಿದ್ದೇನೆ.
ಮುಂಬರುವ ದಿನಮಾನಗಳಲ್ಲಿ ಕೊಕಟನೂರ, ರಾಂಪೂರ, ಬೆನಕೊಟಗಿ, ಆಹೇರಿ, ಬಂಕಲಗಿ ಸೇರಿದಂತೆ ಸಿಂದಗಿ ನಗರಕ್ಕೆ ಸೇರುವ ಎಲ್ಲ ರಸ್ತೆಗಳನ್ನು ನಿರ್ಮಾಣ ಮಾಡುವ ಮಹದಾಸೆಯನ್ನು ಹೊಂದಿದ್ದು, ಹಂತ ಹಂತವಾಗಿ ಅವುಗಳ ಭೂಮಿ ಪೂಜಾ ಸಮಾರಂಭ ಕೈಗೊಳ್ಳಲಾಗುವುದು. ನಗರದ ಸೌಂದರ್ಯಿಕರಣಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುವುದು ಎಂದರು.
ಈ ವೇಳೆ ಗುತ್ತಿಗೆದಾರ ಮುತ್ತು ಮುಂಡೇವಾಡಗಿ, ರಮೇಶ ಹೂಗಾರ, ಪ್ರಕಾಶ ಗುಣಾರಿ, ಚನ್ನಪ್ಪ ಗೋಣಿ, ಶರಣು ಉಪ್ಪಿನ, ಸಾದಿಕ್ ಸುಂಬಡ ಸೇರಿದಂತೆ ಇತರರು ಇದ್ದರು.


