ಗಣಿಬಾಧಿತ ವಲಯ ಪ್ರದೇಶಗಳ ಮಣ್ಣು, ನೀರಿನ ಸಂರಕ್ಷಣೆ ಅಗತ್ಯ: ಮಂಜುನಾಥ್

Ravi Talawar
ಗಣಿಬಾಧಿತ ವಲಯ ಪ್ರದೇಶಗಳ ಮಣ್ಣು, ನೀರಿನ ಸಂರಕ್ಷಣೆ ಅಗತ್ಯ: ಮಂಜುನಾಥ್
WhatsApp Group Join Now
Telegram Group Join Now
CEPMIZ ಯೋಜನೆಯಡಿ ಸಮುದಾಯ ಸಹಭಾಗಿತ್ವ ಕಾರ್ಯಕ್ರಮ
ಬಳ್ಳಾರಿ,ಮೇ 12,: ಗಣಿಬಾಧಿತ ವಲಯ ಪ್ರದೇಶದ ರೈತರಿಗೆ ತಮ್ಮ ತಮ್ಮ ಜಮೀನುಗಳಲ್ಲಿ ಯಾವ ರೀತಿಯಾಗಿ ಮಣ್ಣು ಮತ್ತು ನೀರಿನ ಸಂರಕ್ಷಣೆ ಮಾಡಬೇಕು, ಸಂರಕ್ಷಣೆಯನ್ನು ಮಾಡಲು ಯಾವ ರೀತಿಯಾಗಿ ಉಪಚಾರ ಕೈಗೊಳ್ಳಬೇಕು ಎಂಬುದರ ಬಗ್ಗೆ ತಿಳಿಸಿಕೊಡುವುದು ಗಣಿಗಾರಿಕೆ ಪ್ರಭಾವಿತ ವಲಯಗಳ ಸಮಗ್ರ ಪರಿಸರ ಯೋಜನೆಯ ಉದ್ದೇಶವಾಗಿದೆ ಎಂದು ಉಪ ಕೃಷಿ ನಿರ್ದೇಶಕ ಮಂಜುನಾಥ್ ಅವರು ಹೇಳಿದರು.
ಜಲಾನಯನ ಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆ ಬಳ್ಳಾರಿ ಹಾಗೂ ಗ್ರಾಮ್ಸ್ ಲಿಂಗಸೂಗೂರು ಅನುಷ್ಠಾನ ಸಂಸ್ಥೆಯ ವತಿಯಿಂದ ಗಣಿಗಾರಿಕೆ ಪ್ರಭಾವಕ್ಕೆ ಒಳಗಾದ ವಲಯಗಳಿಗೆ ಸಮಗ್ರ ಪರಿಸರ ಯೋಜನೆ (CEPMIZ) ಅಡಿ ಬಳ್ಳಾರಿ ತಾಲೂಕಿನ ಹಲಕುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹೊನ್ನಾಳಿ ತಾಂಡದಲ್ಲಿ ಗುರುವಾರ ಏರ್ಪಡಿಸಿದ್ದ ಸಮುದಾಯ ಸಹಭಾಗಿತ್ವ ಕಾರ್ಯಕ್ರಮ (ಪಿಆರ್ಎ) ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈ ಯೋಜನೆಯು ಗಣಿಗಾರಿಕೆ ಪರಿಣಾಮ ವಲಯಕ್ಕೆ ರಾಜ್ಯದ ನಾಲ್ಕು ಜಿಲ್ಲೆಗಳು ಮೊದಲನೇ ಹಂತದಲ್ಲಿ ಆಯ್ಕೆಯಾಗಿದ್ದು, ಅದರಲ್ಲಿ ಬಳ್ಳಾರಿ ಜಿಲ್ಲೆಯು ಕೂಡ ಒಂದಾಗಿದೆ. ಈ ಯೋಜನೆಯು ಐದು ವರ್ಷದ ಅವಧಿಗೆ ಅನುಷ್ಠಾನ ಮಾಡಲಾಗುವುದು ಎಂದು ತಿಳಿಸಿದರು.
ಈ ಯೋಜನೆಯಡಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ತಮ್ಮ ಮನೆಗಳಿಗೆ ಖುದ್ದಾಗಿ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿ ಅಗತ್ಯವಿರುವ ಮಾಹಿತಿಯ ದಾಖಲೆಗಳನ್ನು ಪಡೆದುಕೊಳ್ಳಲು ಸಮೀಕ್ಷೆ ಮಾಡಲಾಗುತ್ತದೆ. ಹಾಗಾಗಿ ಗ್ರಾಮದ ಎಲ್ಲಾ ರೈತರು ಸರಿಯಾಗಿ ಮಾಹಿತಿ ಕೊಡಬೇಕು ಎಂದು ಹೇಳಿದರು.
ಸಹಾಯಕ ಕೃಷಿ ನಿರ್ದೇಶಕ ದಯಾನಂದ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಗಣಿಬಾಧಿತ ಪ್ರದೇಶದಲ್ಲಿ ನಾಶವಾಗಿರುವ ಮೇಲ್ಮಣ್ಣನ್ನು ಪುನರ್ ಸ್ಥಾಪಿಸಿ ಮಣ್ಣು ಮತ್ತು ನೀರಿನ ಸಂರಕ್ಷಣೆ ಮೂಲಕ ಮಣ್ಣಿನ ಫಲವತ್ತತೆಯನ್ನು ಪುನರುಜ್ಜೀವನಗೊಳಿಸಿ ವ್ಯವಸಾಯಕ್ಕೆ ಯೋಗ್ಯವನ್ನಾಗಿಸುವ ಮೂಲಕ ರೈತರಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸುಸ್ಥಿರತೆಯನ್ನು ಪಡೆಯಲು ಈ ಯೋಜನೆ ಅನುಷ್ಠಾನವಾಗುತ್ತಿದೆ ಎಂದು ತಿಳಿಸಿದರು.
ಗ್ರಾಮ್ಸ್ ಸಂಸ್ಥೆಯ ಸಿಇಓ ಮಹೇಶ್ ಕುಮಾರ್ ಅವರು ಮಾತನಾಡಿ, ಯೋಜನಾ ವ್ಯಾಪ್ತಿಯ ಗ್ರಾಮಗಳ ರೈತರಿಗೆ ತಮ್ಮ ತಮ್ಮ ಜಮೀನುಗಳಲ್ಲಿ ಯಾವ ರೀತಿಯಾಗಿ ಮಣ್ಣು ಮತ್ತು ನೀರಿನ ಸಂರಕ್ಷಣೆಯನ್ನು ಮಾಡಿಕೊಳ್ಳಬೇಕು, ಸಂರಕ್ಷಣೆಯನ್ನು ಮಾಡಲು ಯಾವ ರೀತಿಯಾಗಿ ಉಪಚಾರಗಳನ್ನು ಮಾಡಬೇಕು ಎಂದು ತಿಳಿಸಿಕೊಡಲಾಗುವುದು ಎಂದರು.
ಈ ಯೋಜನೆಯಡಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ತಮ್ಮ ಜಮೀನುಗಳಿಗೆ ಖುದ್ದಾಗಿ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿ ಅಗತ್ಯವಿರುವ ಮತ್ತು ಜಮೀನಿಗೆ ಸೂಕ್ತವೆನಿಸುವ ಮಣ್ಣು ಮತ್ತು ನೀರಿನ ಸಂರಕ್ಷಣೆ ಉಪಚಾರ, ತೋಟಗಾರಿಕೆ, ಅರಣ್ಯೀಕರಣ, ಜೀವನೋಪಾಯ ಚಟುವಟಿಕೆಗಳ ಮಾಹಿತಿ ನೀಡುವರು ಎಂದರು.
ರೈತರಿಗೆ ತಿಳಿಸಿದಂತಹ ಉಪಚಾರಗಳನ್ನು ಯೋಜನಾ ವಿಸ್ತೃತ ವರದಿಯಲ್ಲಿ ನಿಯಮಾನಸಾರ ನಮೂದಿಸಿ, ಜಿಲ್ಲಾ ಮಟ್ಟದ ಸಭೆಯಲ್ಲಿ ಅನುಮೋದನೆ ಪಡೆದು ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತದೆ. ಈ ಯೋಜನೆಯನ್ನು ಉಚ್ಚ ನ್ಯಾಯಾಲಯ ನಿರ್ದೇಶನದ ಮೇರೆಗೆ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ ನಿರ್ದೇಶನ ಮತ್ತು ಮಾರ್ಗದರ್ಶನದಲ್ಲಿ ಅನುಷ್ಠಾನವಾಗುತ್ತದೆ ಎಂದು ನಕ್ಷೆಯ ಮೂಲಕ ಗ್ರಾಮಸ್ಥರಿಗೆ ಮನ ಮುಟ್ಟುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ತೇರಿ ಸಂಸ್ಥೆಯ ವಿಜಯ ಮೇಟಿ, ಕ್ಷೇತ್ರದ ಜಿಲ್ಲಾ ತಂಡದ ನಾಯಕರಾದ ಅಶ್ವಿನಿ, ಗ್ರಾಮ ಪಂಚಾಯಿತಿ ಸದಸ್ಯರಾದ ನಿರ್ಮಲ ಬಾಯಿ, ರಮೇಶ್ ನಾಯಕ್, ರವಿನಾಯಕ್, ಕೃಷಿ ಅಧಿಕಾರಿಗಳಾದ ಲೋಕರಾಜ್, ಬಸವರಾಜ್ ಸೇರಿದಂತೆ ಸಾರ್ವಜನಿಕರು ಹಾಜರಿದ್ದರು.
ಜಾನೆಕುಂಟೆ-ವೇಣಿ ವೀರಾಪುರ ಯೋಜನೆಯ ತಂಡದ ನಾಯಕರಾದ ವೀಣಾ ಅವರು ಕಾರ್ಯಕ್ರಮ ನಿರೂಪಿಸಿದರು. ಹಲಕುಂದಿ ಬೆಳಗಲ್ಲು ಯೋಜನೆಯ ತಂಡದ ನಾಯಕರಾದ ಅಶ್ವಿನಿ ಅವರು ಸ್ವಾಗತ ಮತ್ತು ವಂದನಾರ್ಪಣೆ ನೆರವೇರಿಸಿದರು.
WhatsApp Group Join Now
Telegram Group Join Now
Share This Article