ಮೈಸೂರು, ನವೆಂಬರ್ 16: ಮುಡಾ ಹಗರಣ ಸಂಬಂಧ ಕಾಂಗ್ರೆಸ್ ಮತ್ತು ಸಿಎಂ ಸಿದ್ದರಾಮಯ್ಯ ವಿರುದ್ಧದ ದೂರುದಾರ ಸ್ನೇಹಮಯಿ ಕೃಷ್ಣ ಮಧ್ಯೆ ವಾಕ್ಸಮರ ಜೋರಾಗಿದೆ. ಅತ್ತ ಪೊಲೀಸ್ ದೂರು, ಮನವಿಗಳೂ ಸಲ್ಲಿಕೆಯಾಗಿವೆ. ಸ್ನೇಹಮಯಿ ಕೃಷ್ಣ ವಿರುದ್ಧ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಮೈಸೂರಿನ ಲಕ್ಷ್ಮೀಪುರಂ ಠಾಣೆಗೆ ದೂರು ನೀಡಿ, ಕ್ರಮಕ್ಕೆ ಆಗ್ರಹಿಸಿದ್ದಾರೆ.
‘ಸ್ನೇಹಮಯಿ ಕೃಷ್ಣ ರೌಡಿಶೀಟರ್, ಆತನ ವಿರುದ್ಧ 44 ಕೇಸ್ಗಳಿವೆ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ದಾಖಲೆ ಬಿಡುಗಡೆ ಮಾಡುತ್ತಿದ್ದಾನೆ. ಸಿಎಂ ಸಿದ್ದರಾಮಯ್ಯ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸುತ್ತಿದ್ದಾನೆ’ ಎಂದು ಲಕ್ಷ್ಮಣ್ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದು, ಸ್ನೇಹಮಯಿ ಕೃಷ್ಣನನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ರೌಡಿಶೀಟರ್ ಆಗಿರುವ ಸ್ನೇಹಮಯಿ ಸುಳ್ಳು ದಾಖಲೆ ನೀಡಿದ್ದಾನೆ. ಸಿಎಂ ಪತ್ನಿ ಪಾರ್ವತಿ ಹೆಸರಲ್ಲಿ ಸುಳ್ಳು ದಾಖಲೆಗಳನ್ನು ನೀಡಿದ್ದಾನೆ. ಆತ ಬಿಡುಗಡೆ ಮಾಡಿರುವ ಚಲನ್ ಹಣ ಕಟ್ಟಿರುವ ದಾಖಲೆ ಸುಳ್ಳು. ದಾಖಲೆಗಳು ಸುಳ್ಳು ಎಂದು ಮುಡಾ ಅಧಿಕಾರಿಗಳೇ ಹೇಳುತ್ತಾರೆ. ಕೂಡಲೇ ಸ್ನೇಹಿಮಯಿ ಕೃಷ್ಣನನ್ನು ಪೊಲೀಸರು ಬಂಧಿಸಬೇಕು. ಬಂಧಿಸದಿದ್ದರೆ ನಾಳೆಯಿಂದ ಧರಣಿ ಸತ್ಯಾಗ್ರಹ ಮಾಡುತ್ತೇವೆ ಎಂದು ಲಕ್ಷ್ಮಣ್ ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ನೀಡಿರುವ ದೂರಿಗೆ ತಿರುಗೇಟು ನೀಡಿರುವ ಸ್ನೇಹಮಯಿ ಕೃಷ್ಣ, ಸಿಎಂ ಸಿದ್ದರಾಮಯ್ಯ ಅವರನ್ನು ಗಡಿಪಾರು ಮಾಡಬೇಕು ಎಂದಿದ್ದಾರೆ. ಮೈಸೂರಿನಲ್ಲಿ ‘ಟಿವಿ9’ಗೆ ಹೇಳಿಕೆ ನೀಡಿದ ಅವರು, ನಾನು ಕಾನೂನುಬದ್ಧವಾದ ಹೋರಾಟ ಮಾಡುತ್ತಿದ್ದೇನೆ. ಸಮಾಜಕ್ಕೆ ನ್ಯಾಯ ಕೊಡಿಸಲು ನಾನು ಹೋರಾಡುತ್ತಿದ್ದೇನೆ. ನನ್ನ ಗಡಿಪಾರು ಮಾಡಲು ಅವಕಾಶವಿಲ್ಲ. ಸಿದ್ದರಾಮಯ್ಯರನ್ನ ಗಡಿಪಾರು ಮಾಡಲು ಸಾಕಷ್ಟು ಅವಕಾಶಗಳಿವೆ. ಸುಳ್ಳು ಭಾಷಣ ಮಾಡಿ ರಾಜ್ಯದ ಜನರನ್ನ ಪ್ರಚೋದಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಸಮಾಜದ ಶಾಂತಿ ಹಾಳು ಮಾಡುತ್ತಿದ್ದಾರೆ. ಹೋರಾಟ ಮಾಡಬೇಕು ಎಂದು ಅವರು ಕರೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.