ಬೆಂಗಳೂರು: ಸಚಿವ ಸತೀಶ್ ಜಾರಕಿಹೊಳಿ ಮತ್ತು ಪ್ರಿಯಾಂಕ್ ಖರ್ಗೆ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ, ವಿಧಾನಪರಿಷತ್ ಸ್ಥಾನ ನೀಡುವ ಬಗ್ಗೆ ಮಾತುಕತೆ ನಡೆಸಿದರು.
ಸಚಿವ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಕಾಂಗ್ರೆಸ್ ಶಾಸಕರ ನಿಯೋಗವು ಭೇಟಿಯಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತ್ ಕುಮಾರ್ಗೆ ಪರಿಷತ್ ಸ್ಥಾನ ನೀಡುವಂತೆ ಒತ್ತಾಯಿಸಿದರು. ಈ ವೇಳೆ ಶಾಸಕರಾದ ಹಂಪನಗೌಡ ಬಾದರ್ಲಿ, ತುರುವಿಹಾಳ್, ದದ್ದಲ್ ಹಾಗೂ ಮುಖಂಡರು ಉಪಸ್ಥಿತರಿದ್ದರು. ವಸಂತ್ ಕುಮಾರ್ಗೆ ಪರಿಷತ್ ಟಿಕೆಟ್ ನೀಡುವ ನಿಟ್ಟಿನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ”ಬ್ರೇಕ್ ಫಾಸ್ಟ್ ಏನಿಲ್ಲ, ಹಾಗೆಯೇ ಬಂದಿದ್ದು. ಪರಿಷತ್ ಚುನಾವಣೆ ವಿಚಾರವಾಗಿ ಮಾತನಾಡಿದ್ದೇನೆ. ಬೆಂಗಳೂರಿಗೆ ಮಾತ್ರ ಸೀಮಿತ ಮಾಡಿ ಸೀಟ್ ಹಂಚಿಕೆ ಮಾಡಬಾರದು. ರಾಜ್ಯವ್ಯಾಪಿ ಪಕ್ಷದ ದೃಷ್ಟಿಯಿಂದ ಸೀಟ್ ಹಂಚಿಕೆ ಮಾಡಬೇಕು. ಸಣ್ಣ ಸಮುದಾಯಗಳಿಗೆ ಅವಕಾಶ ಸಿಗಬೇಕು. ಕೆಲವು ಸಮುದಾಯಗಳು ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಆಗಲ್ಲ. ಅಂತಹ ಸಮುದಾಯಗಳಿಗೆ ಕೊಡಬೇಕೆಂದು ಒತ್ತಾಯಿಸಿರುವುದಾಗಿ” ತಿಳಿಸಿದರು.
”ಲಂಬಾಣಿ ಸಮುದಾಯ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದಾರೆ. ಈ ಸಮುದಾಯಕ್ಕೆ ಕೊಡಬೇಕು ಅಂತ ಮನವಿ ಮಾಡಿದ್ದೇವೆ. ನಾಲ್ಕೈದು ಜನರು ಆಕಾಂಕ್ಷಿಗಳು ಇದ್ದಾರೆ. ಪಕ್ಷ ಅವರನ್ನು ಗಮನಿಸಿ ಅವಕಾಶ ನೀಡಬೇಕು. ಯತೀಂದ್ರ ಅವರಿಗೆ ಹಿಂದೆಯೇ ಸ್ಥಾನ ನೀಡಬೇಕು ಅಂತ ಕಮಿಟ್ ಆಗಿದೆ. ಸರ್ಕಾರ ರಚನೆ ಸಂದರ್ಭದಲ್ಲಿ ಮಾತುಕತೆಯಾಗಿದೆ. ಯತೀಂದ್ರ ಅವರಿಗೆ ಕೊಟ್ಟೇ ಕೊಡ್ತಾರೆ” ಎಂದರು.
”ಕೆಲವರನ್ನು ಅನಿವಾರ್ಯವಾಗಿ ಪುನರಾವರ್ತನೆ ಮಾಡಬೇಕಾಗುತ್ತದೆ. ಅಲ್ಪಸಂಖ್ಯಾತರಿಗೆ ಆದ್ಯತೆ ನೀಡಬೇಕಾಗುತ್ತೆ. ಈ ಬಗ್ಗೆ ಹೈಕಮಾಂಡ್ ಜೊತೆ ಮಾತನಾಡುವ ಭರವಸೆ ನೀಡಿದ್ದಾರೆ” ಎಂದು ಮಾಹಿತಿ ಹಂಚಿಕೊಂಡರು.