ಪಣಜಿ: ಉತ್ತರ ಗೋವಾದಲ್ಲಿ ದೇವಾಲಯವೊಂದರ ಉತ್ಸವದ ವೇಳೆ ಕಾಲ್ತುಳಿತ ಸಂಭವಿಸಿ ಆರು ಮಂದಿ ಭಕ್ತರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಣಜಿಯಿಂದ ಸುಮಾರು 40 ಕಿ.ಮೀ. ದೂರದಲ್ಲಿರುವ ಶಿರ್ಗಾವೊ ಗ್ರಾಮದಲ್ಲಿನ ಶ್ರೀ ಲೈರೈ ದೇವಿ ದೇವಸ್ಥಾನದಲ್ಲಿ ಶನಿವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಘಟನೆ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಾರ್ಷಿಕ ಉತ್ಸವಕ್ಕಾಗಿ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಕಿರಿದಾದ ಹಾದಿಗಳಲ್ಲಿ ಸೇರುತ್ತಿದ್ದಾಗ ಕಾಲ್ತುಳಿತ ಸಂಭವಿಸಿದೆ. ದೇವಾಲಯದ ಉತ್ಸವಕ್ಕಾಗಿ ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕದ ಸಾವಿರಾರು ಭಕ್ತರು ಆಗಮಿಸಿದ್ದರು. ಕಾಲ್ತುಳಿತಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಈ ಕುರಿತು ತನಿಖೆಗೆ ನಡೆಸಲಾಗುವುದು ಎಂದು ಹಿರಿಯ ಅಧಿಕಾರಿಗಳು ಹೇಳಿದರು.
ಪ್ರಧಾನಿ ಸಂತಾಪ: ಕಾಲ್ತುಳಿತದ ವರದಿಯಾಗುತ್ತಿದ್ದಂತೆ, ಪ್ರಧಾನಿ ನರೇಂದ್ರ ಮೋದಿ ಅವರು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರಿಂದ ಮಾಹಿತಿ ಪಡೆದಿದ್ದಾರೆ. ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಪ್ರಧಾನಿ, ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳು ಬೇಗ ಗುಣಮುಖರಾಗಲಿ. ಸ್ಥಳೀಯ ಆಡಳಿತದಿಂದ ಅಗತ್ಯ ಸಹಾಯ ಮುಂದುವರೆಯಲಿದೆ ಎಂದು ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.