ಕೊಪ್ಪಳ, ಆಗಸ್ಟ್.21: ಸಚಿವ ಹೆಚ್ಡಿ ಕುಮಾರಸ್ವಾಮಿ ಅವರನ್ನು ಅರೆಸ್ಟ್ ಮಾಡಿ ಎಂದು ನಾನು ಎಲ್ಲೂ ಹೇಳಿಲ್ಲ. ಆದರೆ ಅಂತಹ ಸನ್ನಿವೇಶ ಬಂದ್ರೆ ಮುಲಾಜಿಲ್ಲದೆ ಅರೆಸ್ಟ್ ಮಾಡುತ್ತೇವೆ. ಕುಮಾರಸ್ವಾಮಿ ಭಯ ಪಟ್ಟಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ. SSVM ಕಂಪನಿಗೆ ನಿಯಮ ಉಲ್ಲಂಘಿಸಿ ಭೂಮಿ ಮಂಜೂರು ಆರೋಪಕ್ಕೆ ಸಂಬಂಧಿಸಿ ಕೊಪ್ಪಳ ತಾಲೂಕಿನ ಗಿಣಗೇರಾ ಏರ್ಸ್ಟ್ರಿಪ್ನಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಕುಮಾರಸ್ವಾಮಿ ಸುಳ್ಳು ಹೇಳಿ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅವರಿಗೆ ಪ್ರಾಸಿಕ್ಯೂಷನ್ ಸಂಕಷ್ಟ ಎದುರಾಗಿದೆ. ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಹೆಚ್.ಡಿ ಕುಮಾರಸ್ವಾಮಿ, ಲೋಕಾಯುಕ್ತದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ 60 ಕೇಸ್ ಇದೆ ಎಂದಿದ್ದರು. ಸದ್ಯ ಇದೀಗ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ತಿರಗೇಟು ಕೊಟ್ಟಿದ್ದಾರೆ. ಕುಮಾರಸ್ವಾಮಿ ಭಯ ಪಟ್ಟುಕೊಂಡಿದ್ದಾರೆ ಅಂತಾ ಲೇವಡಿ ಮಾಡಿದ್ದಾರೆ.
ಅರೆಸ್ಟ್ ಮಾಡಿ ಅಂತ ನಾನು ಎಲ್ಲೂ ಹೇಳಿಲ್ಲ, ಅಂತಹ ಸನ್ನಿವೇಶ ಬಂದ್ರೆ ಯಾವುದೇ ಮುಲಾಜಿಲ್ಲದೇ ಅರೆಸ್ಟ್ ಮಾಡ್ತೇವೆ. ಕುಮಾರಸ್ವಾಮಿ ಭಯ ಪಟ್ಟಿದ್ದಾರೆ. ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ಕೊಡ್ತಾರೆಂದು ಭಯ ಪಟ್ಟಿದ್ದಾರೆ.
ಪ್ರಾಸಿಕ್ಯೂಷನ್ಗೆ ನಾವು ಕೇಳಿಲ್ಲ, ಖಾಸಗಿಯವರು ಸಹ ಕೇಳಿಲ್ಲ. ಎಸ್ಐಟಿ ಹಾಗೂ ಲೋಕಾಯುಕ್ತ ತನಿಖೆ ಮಾಡಿ ಸಾಕ್ಷ್ಯ ಸಂಗ್ರಹ ಮಾಡಿ ಪ್ರಾಸಿಕ್ಯೂಷನ್ಗೆ ಅನುಮತಿ ಕೇಳಿದ್ದಾರೆ. ಅದರ ಅರ್ಥ ಕುಮಾರಸ್ವಾಮಿ ವಿರುದ್ಧ ಸಾಕ್ಷಿಗಳು ಇವೆ ಅಂತಾ. ತನಿಖೆ ಮಾಡಿ, ಸಾಕ್ಷಿ ಇದ್ದರೂ ಸಹ ಬಿಟ್ಟುಬಿಡಬೇಕಾ? ರಾಜ್ಯಪಾಲರು ತಾರತಮ್ಯ ಮಾಡಿದ್ದಾರೆ, ನನಗೆ ನೋಟಿಸ್ ಕೊಟ್ರು, ಟಿ.ಜೆ.ಅಬ್ರಹಾಂ ಕೊಟ್ಟ ಪತ್ರದ ಮೇಲೆ ಅವತ್ತೇ ನೋಟಿಸ್ ನೀಡಿದ್ದಾರೆ. ಆದರೆ ಕೇಂದ್ರ ಸಚಿವ ಕುಮಾರಸ್ವಾಮಿಗೆ ಯಾಕೆ ನೋಟಿಸ್ ಕೊಡಲಿಲ್ಲ? ಲೋಕಾಯುಕ್ತ ತನಿಖೆ ಮಾಡಿ ಪ್ರಾಶಿಕ್ಯೂಷನ್ಗೆ ಕೇಳಿದ್ರೂ ಕೊಟ್ಟಿಲ್ಲ. ಕುಮಾರಸ್ವಾಮಿ ಸುಳ್ಳು ಹೇಳಿ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.