ಬೆಂಗಳೂರು, ಮೇ 14: ಬಿಟ್ ಕಾಯಿನ್ ಹಗರಣ ಸಂಬಂಧ ತನಿಖೆ ತೀವ್ರಗೊಳಿಸಿರುವ ಎಸ್ಐಟಿ ಐಜಿಪಿ ಸಂದೀಪ್ ಪಾಟೀಲ್ಗೆ ಮತ್ತೆ ನೋಟಿಸ್ ಜಾರಿ ಮಾಡಿದೆ. ವಿಚಾರಣೆಗೆ ಹಾಜರಾಗುವಂತೆ ಸಂದೀಪ್ ಪಾಟೀಲ್ಗೆ ನೋಟಿಸ್ ನೀಡಲಾಗಿದೆ. ಜತೆಗೆ, ಈ ಹಿಂದೆ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೋಟಿಸ್ ನೀಡಿತ್ತು. ಆದರೆ, ಸಂದೀಪ್ ಪಾಟೀಲ್ ವಿಚಾರಣೆಗೆ ಹಾಜರಾಗಿರಲಿಲ್ಲ. ಈ ಬಗ್ಗೆ ಕಾರಣ ತಿಳಿಸುವಂತೆಯೂ ನೋಟಿಸ್ನಲ್ಲಿ ಎಸ್ಐಟಿ ಸೂಚಿಸಿದೆ.
ಬಿಟ್ ಕಾಯಿನ್ ಹಗರಣ ಸಂಬಂಧ ಫೆಬ್ರವರಿಯಲ್ಲಿ ಸಂದೀಪ್ ಪಾಟೀಲ್ರನ್ನು ಎಸ್ಐಟಿ ತೀವ್ರ ವಿಚಾರಣೆಗೆ ಒಳಪಡಿಸಿತ್ತು. ಸುಮಾರು 3 ತಾಸು ವಿಚಾರಣೆಗೆ ಒಳಪಡಿಸಿ ಮಾಹಿತಿ ಕಲೆ ಹಾಕಿತ್ತು. ಬಿಟ್ ಕಾಯಿನ್ ಹಗರಣ ನಡೆದ ಸಂದರ್ಭದಲ್ಲಿ ಸಂದೀಪ್ ಪಾಟೀಲ್ ಸಿಸಿಬಿ ಮುಖ್ಯಸ್ಥರಾಗಿದ್ದರು. ಹೀಗಾಗಿ ಅವರಿಗೂ ಹಗರಣದ ಉರುಳು ಸುತ್ತಿಕೊಂಡಿದೆ.
ಬಿಟ್ ಕಾಯಿನ್ ಹಗರಣ ಸಂಬಂಧ ತನಿಖೆಗೆ 2023ರ ಜುಲೈನಲ್ಲಿ ಕಾಂಗ್ರೆಸ್ ಸರ್ಕಾರ ಎಸ್ಐಟಿ ರಚನೆ ಮಾಡಿತ್ತು. ಆಗ ಕಾಟನ್ ಪೇಟೆ ಠಾಣೆಯಲ್ಲಿ ಒಂದು ಕೇಸ್ ದಾಖಲು ಮಾಡಿದ್ದರು. ಆರೋಪಿಗಳ ಹೆಸರು ಪ್ರಸ್ತಾಪಿಸದೇ ತನಿಖೆ ಶುರುಮಾಡಲಾಗಿತ್ತು. ಇಷ್ಟೇ ಅಲ್ಲದೇ ಪ್ರಕರಣದಲ್ಲಿ ಸಂತೋಷ್ ಮತ್ತು ಪ್ರಶಾಂತ್ ಬಾಬು ಎನ್ನುವವರನ್ನು ಬಂಧಿಸಲಾಗಿತ್ತು. ಬಿಟ್ ಕಾಯಿನ್ ಹಗರಣ ಪ್ರಕರಣದ ಆರೋಪಿ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನನ್ನು ಬಂಧಿಸುವಲ್ಲಿ ಮೇ 7ರಂದು ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದರು.
2015ರಲ್ಲಿ ಕೆಂಪೇಗೌಡನಗರ ಠಾಣೆಯಲ್ಲಿ ದಾಖಲಾಗಿದ್ದ ಡ್ರಗ್ಸ್ ಕೇಸ್‌ನಲ್ಲಿ ಶ್ರೀಕಿಯನ್ನು ಬಂಧಿಸಲಾಗಿತ್ತು. ಈ ಕೇಸ್ ತನಿಖೆ ವೇಳೆ ಬಿಟ್‌ಕಾಯಿನ್ ಪ್ರಕರಣ ಬೆಳಕಿಗೆ ಬಂದಿತ್ತು. 2020ರಲ್ಲಿ ಸುಮಾರು 1000 ಕೋಟಿ ಹಗರಣದ ಬಿಟ್‌ಕಾಯಿನ್ ಕೇಸ್‌ನಲ್ಲಿ ಶ್ರೀಕಿ ಬಂಧನವಾಗಿತ್ತು. ಅಲ್ಲದೆ ಶ್ರೀಕಿ ಕಳೆದ ಐದಾರು ವರ್ಷಗಳಿಂದ ವಿವಿಧ ಕ್ರಿಪ್ಟೋ ಕರೆನ್ಸಿ ಮಾರಾಟ ಪ್ಲಾಟ್‌ಫಾರ್ಮ್‌ಗಳನ್ನು ಹ್ಯಾಕ್ ಮಾಡಿ ಅವುಗಳಿಂದ ಸಾವಿರಾರು ಬಿಟ್‌ಕಾಯಿನ್‌ಗಳನ್ನು ಎಗರಿಸಿದ್ದನು. ಅಲ್ಲದೇ ರಾಜ್ಯ ಸರ್ಕಾರದ ಇ-ಸಂಗ್ರಹಣಾ ಪೋರ್ಟಲ್ ಜಾಲತಾಣ ಹ್ಯಾಕ್ ಮಾಡಿದ್ದನು. ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆತ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ.