“ಲಿಂ. ಶ್ರೀ ಮರುಳ ಶಂಕರ ದೇವರ ಜೀವನ ಚರಿತ್ರೆಯ ಬಿಡುಗಡೆ”
ಅಥಣಿ : ಮಹಾತಪಸ್ವಿ ಮುರುಘೇಂದ್ರ ಶಿವಯೋಗಿಗಳ ಅಚ್ಚುಮೆಚ್ಚಿನ ಶಿಷ್ಯರಾಗಿದ್ದ ಶ್ರೀ ಮರುಳ ಶಂಕರ ದೇವರು ಶ್ರೀಮಠದಲ್ಲಿ ಮೌನವಾಗಿಯೇ ಇದ್ದುಕೊಂಡು ಅಪಾರ ಭಕ್ತರ ಹೃದಯ ಗೆದ್ದಿರುವ ಯತಿಗಳಾಗಿದ್ದರು. ಅವರ ಮತ್ತು ಭಕ್ತರ ಸಂಬಂಧ ತಾಯಿ ಮಗುವಿನ ಸಂಬಂಧದoತೆ ಇತ್ತು ಎಂದು ಗಚ್ಚಿನ ಮಠದ ಶಿವ ಬಸವ ಸ್ವಾಮೀಜಿ ಹೇಳಿದರು.
ಅವರು ಸುಕ್ಷೇತ್ರ ಗಚ್ಚಿನ ಮಠದಲ್ಲಿ ಮೌನಯೋಗಿ ಶ್ರೀ ಮರುಳ ಶಂಕರ ದೇವರ 13ನೇ ಸ್ಮರಣೋತ್ಸವ ಹಾಗೂ ಡಾ. ಮಹಾಂತೇಶ ಉಕಲಿ ವಿರಚಿತ ” ಮೌನಯೋಗಿ ಶ್ರೀ ಮರುಳ ಶಂಕರ ದೇವರು ” ಎಂಬ ಜೀವನ ಚರಿತ್ರೆ ಗ್ರಂಥ ಬಿಡುಗಡೆಗೊಳಿಸುವ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ಶಿವಯೋಗಿಗಳು ಶಿವಲಿಂಗವಾದರೆ, ಲಿಂಗದ ಮುಂದಿನ ನಂದಿಯಂತೆ ಶ್ರೀ ಮರುಳ ಶಂಕರ ದೇವರು ಸದಾ ಶಿವಯೋಗಿಗಳ ಜೊತೆಯಲ್ಲಿದ್ದು ಅವರ ಸೇವೆ ಮಾಡುತ್ತಿದ್ದರು.ಅವರು ಶತಾಯುಷಿಗಳಾಗಿ ನಿರಾಬಾರಿ ಜಂಗಮರಾಗಿ ಬದುಕಿದರು. ಅವರು ಶ್ರೀಮಠದ ಜೀವಕಳೆಯಾಗಿ, ಭಕ್ತರೊಂದಿಗೆ ಸದಾ ಹಸನ್ಮುಖಿಯಾಗಿ ಆಶೀರ್ವದಿಸುವ ಜಂಗಮರಾಗಿದ್ದರು. ಗಚ್ಚಿನ ಮಠದ ಸಪ್ತ ಯತಿಗಳಲ್ಲಿ ಇವರು ಕೂಡ ಒಬ್ಬರು. ಪ್ರತಿಯೊಂದು ಮಗು ಹುಟ್ಟುತ್ತಲೇ ವಿಶ್ವಮಾನವನಾಗಿ ಹುಟ್ಟಿದರೂ ಸಾಮಾಜಿಕ ವ್ಯವಸ್ಥೆಯಲ್ಲಿ ಧರ್ಮ, ಜಾತಿಯ ಸಂಕೋಲೆಗಳಲ್ಲಿ ಬೆಳೆಸಿ ವಿಷಮಾನವನನ್ನಾಗಿ ಬೆಳಸುತ್ತಿರುವುದು ವಿಷಾಧನೀಯ ಎಂದರು.
ಶಿವಯೋಗಿಗಳ ಸನ್ಮಾರ್ಗದಲ್ಲಿ ಬೆಳೆದ ಮರಳು ಶಂಕರ ದೇವರ ಜೀವನ ಚರಿತ್ರೆಯನ್ನು ಪಟ್ಟಣದ ಹಿರಿಯ ಸಾಹಿತಿ ಡಾ. ಮಹಾಂತೇಶ್ ಉಕಲಿ ಅವರು ಪುಸ್ತಕ ರೂಪದಲ್ಲಿ ಅವರ ಬದುಕನ್ನು ಭಕ್ತರ ಮನಮುಟ್ಟುವಂತೆ ಪ್ರಕಟಿಸಿದ್ದಾರೆ. ಮರಳು ಶಂಕರ ದೇವರು ಅವರ ಬದುಕು ಒಂದು ತೆರೆದ ಪುಸ್ತಕವಿದ್ದಂತೆ. ಎಲ್ಲ ಸದ್ಭಕ್ತರು ಈ ಪುಸ್ತಕವನ್ನು ಕೊಂಡು ಓದುವಂತೆ ಕರೆ ನೀಡಿದರು.
ಹಾರೂಗೇರಿಯ ಹಿರಿಯ ಸಾಹಿತಿ, ಡಾ. ವಿ ಎಸ್ ಮಾಳಿ ಮೌನಯೋಗಿಗಳ ಜೀವನ ಚರಿತ್ರೆ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ ಇದು ಕೇವಲ ಜೀವನ ಚರಿತ್ರೆಯ ಪುಸ್ತಕವಲ್ಲ,ಮೌನಯೋಗಿ ಮರಳು ಶಂಕರ ದೇವರು ಭಾವ ಶಿಲ್ಪವಾಗಿದ್ದಾರೆ. ಗಚ್ಚಿನಮಠದಲ್ಲಿ ಶಿವಯೋಗಿಗಳು ಶಿವಲಿಂಗವಾದರೆ, ಮೌನಯೋಗಿ ಮರಳು ಶಂಕರ ದೇವರು ಅವರ ಮುಂದಿನ ನಂದಿ ಬಸವಣ್ಣನಂತೆ ಸದಾ ಶಿವಯೋಗಿಗಳ ಸೇವೆಯಲ್ಲಿ ನಿರತರಾಗಿದ್ದರು. ಮೌನವಾಗಿಯೇ ಇದ್ದುಕೊಂಡು ಭಕ್ತರ ಹೃದಯದಲ್ಲಿ ಇಂದಿಗೂ ಉಳಿದುಕೊಂಡಿದ್ದಾರೆ. ಶತಮಾನ ಕಂಡ ಹಿಂತಹ ಸಂತರ ಜೀವನ ಚರಿತ್ರೆ ಬಿಡುಗಡೆಗೊಳಿಸುವುದು ನನ್ನ ಪಾಲಿಗೆ ಬಂದಿರುವುದು ನನ್ನ ಸುಯೋಗ. ಡಾ. ಮಹಾಂತೇಶ ಉಕಲಿ ಅವರು ಮರಳು ಶಂಕರ ಒಡನಾಟದಲ್ಲಿದ್ದು, ಅನೇಕ ಭಕ್ತರಿಂದ ಮಾಹಿತಿ ಸಂಗ್ರಹಿಸಿ ಮಹಾತ್ಮರ ಚರಿತೆಯನ್ನು ನಮ್ಮೆಲ್ಲರಿಗೆ ಒದಗಿಸಿದ್ದಾರೆ. ಪ್ರತಿಯೊಬ್ಬರ ಮನೆಯಲ್ಲಿ ಇಂಥ ಮಹಾತ್ಮರ ಪುಸ್ತಕಗಳು, ವಚನ ಸಂಪುಟಗಳನ್ನು ಓದುವ ಮೂಲಕ ಬದುಕನ್ನು ಸುಂದರ ಮಾಡಿಕೊಳ್ಳಬೇಕು. ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ನಿಪ್ಪಾಣಿಯ ಮಲ್ಲಿಕಾರ್ಜುನ ಸ್ವಾಮೀಜಿ, ಹೊನವಾಡದ ಬಾಬುರಾವ ಮಹಾರಾಜರು, ಲೋಕೋಪಯೋಗಿ ಇಲಾಖೆಯ ಅಭಿಯಂತರ ಮಲ್ಲಿಕಾರ್ಜುನ ಮಗದುಮ್ಮ, ನಿವೃತ್ತ ಶಿಕ್ಷಕ ಹಣಮಂತ ಪೂಜಾರಿ ದಂಪತಿಗಳು ಸೆರೆದಂತೆ ಇನ್ನಿತರರು ಉಪಸ್ಥಿತರಿದ್ದರು. ಹಿರಿಯ ಸಾಹಿತಿ ಡಾ. ಮಹಾಂತೇಶ ಉಕಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ದಿವಾನಮಳ ಸ್ವಾಗತಿಸಿದರು.