ಮುದ್ದೇಬಿಹಾಳ ಫೆ., ೦೨- ಪುರಸಭಾ ವ್ಯಾಪ್ತಿಯಲ್ಲಿ ಇಂದು ಸ್ವಚ್ಛ ಭಾರತ್ ಮಿಷನ್ (ಎಸ್ಬಿಎಂ) 2.0 ನಗರ ಯೋಜನೆಯಡಿ ಐಇಸಿ (IEC) ಕಾರ್ಯಕ್ರಮವಾಗಿ ಸ್ವಚ್ಛತಾ ರ್ಯಾಲಿಯನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಸರ್ಕಾರಿ ಗಂಡು ಮಕ್ಕಳ ಶಾಲೆ ಹಾಗೂ ಸರ್ಕಾರಿ ಪ್ರೌಢಶಾಲೆಗಳಲ್ಲಿ ಶಾಲಾ ಮಕ್ಕಳಿಗೆ ಸ್ವಚ್ಛತೆಯ ಮಹತ್ವದ ಕುರಿತು ಸಮಗ್ರ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಪ್ಲಾಸ್ಟಿಕ್ ನಿಷೇಧ, ತ್ಯಾಜ್ಯ ವಿಂಗಡಣೆ, ಹಾಗೂ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ ಕುರಿತು ಮಾಹಿತಿ ನೀಡಲಾಗಿದ್ದು, ಸ್ವಚ್ಛ ನಗರ ನಿರ್ಮಾಣದ ಸಂಕಲ್ಪದೊಂದಿಗೆ ವಿದ್ಯಾರ್ಥಿಗಳಿಂದ ಸ್ವಚ್ಛತೆಗಾಗಿ ಸಹಿ ಸಂಗ್ರಹಣೆ ಅಭಿಯಾನವನ್ನು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಮುದ್ದೇಬಿಹಾಳ ಪುರಸಭೆಯ ಆಫೀಸ್ ಮ್ಯಾನೇಜರ್ ಹೆಚ್.ಎ. ದಲಾಯತ್, ಆರೋಗ್ಯ ನಿರೀಕ್ಷಕರು ಜಾವೇದ್ ಅಹ್ಮದ್, ನಾಯ್ಕೋಡಿ ಮಹಂತೇಶ್ ಕಟ್ಟಿಮನಿ, ಪುರಸಭೆಯ ಇತರೆ ಸಿಬಂದಿಗಳು, ಶಾಲೆಯ ಮುಖ್ಯಗುರುಗಳು, ಶಿಕ್ಷಕರು, ಹಾಗೂ ಕಮ್ಯೂನಿಟಿ ಮೊಬ್ಲೈಜರ್ ಸಿಬಂದಿಗಳು ಭಾಗವಹಿಸಿದ್ದರು. ಶಾಲಾ ಮಕ್ಕಳು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸ್ವಚ್ಛತಾ ಸಂದೇಶವನ್ನು ಪರಿಣಾಮಕಾರಿಯಾಗಿ ಸಾರಿದರು.
ಪರಿಸರ ಸಂರಕ್ಷಣೆಯ ಉದ್ದೇಶದಿಂದ ಬಟ್ಟೆ ಕೈಚೀಲಗಳ ಬಳಕೆಗೆ ಉತ್ತೇಜನ ನೀಡುವಂತೆ ಶಾಲಾ ಮಕ್ಕಳಿಗೆ ಬ್ಯಾಗ್ಗಳನ್ನು ವಿತರಿಸಲಾಯಿತು. ಜೊತೆಗೆ, ತ್ಯಾಜ್ಯವನ್ನು ಸರಿಯಾಗಿ ವಿಂಗಡಿಸಿ ಸಂಗ್ರಹಿಸಲು ಅನುಕೂಲವಾಗುವಂತೆ ಶಾಲೆಗಳಿಗೆ ವಿಶೇಷ ತ್ಯಾಜ್ಯ ಸಂಗ್ರಹ ಡಬ್ಬಿಗಳನ್ನು ವಿತರಿಸಲಾಯಿತು.
ಸ್ವಚ್ಛತೆ, ಪರಿಸರ ಸಂರಕ್ಷಣೆ ಹಾಗೂ ಪ್ಲಾಸ್ಟಿಕ್ ಮುಕ್ತ ನಗರ ನಿರ್ಮಾಣದ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಈ ಕಾರ್ಯಕ್ರಮ ಮಹತ್ವದ ಪಾತ್ರವಹಿಸಿದೆ.


