ಬಳ್ಳಾರಿ. ಜು. 16,: ಬಳ್ಳಾರಿ ನಾಗರಿಕ ಹೋರಾಟ ಸಮಿತಿ(BNHS)ಯಿಂದ, ನಾಗರಿಕರಿಗೆ ಮೂಲ ಸೌಕರ್ಯ ಒದಗಿಸಬೇಕೆಂದು ಆಗ್ರಹಿಸಿ, ಇದೇ ತಿಂಗಳು 27ರಂದು ನಡೆಯುತ್ತಿರುವ ಜನತೆಯ ಸಮಾವೇಶದ ಹಿನ್ನೆಲೆಯಲ್ಲಿ, ಒಂದು ಲಕ್ಷ ಸಹಿ ಸಂಗ್ರಹ ಅಭಿಯಾನವನ್ನು ಹಮ್ಮಿಕೊಂಡಿದ್ದು, ಇದಕ್ಕೆ ಪೂರಕವಾಗಿ ಇಂದು ಎಪಿಎಂಸಿ(APMC) ಮಾರುಕಟ್ಟೆಯಲ್ಲಿ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿತ್ತು ಎಂದು ನಾಗರಿಕ ಹೋರಾಟ ಸಮಿತಿಯ ಸೋಮಶೇಖರ್ ಗೌಡ ತಿಳಿಸಿದರು.
ಅವರು ಇಂದು ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಮತ್ತು ವರ್ತಕರಿಂದ ಸಹಿ ಸಂಗ್ರಹವನ್ನು ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿ. ಬಳ್ಳಾರಿ ನಗರದ ಸಾರ್ವಜನಿಕರು ಕಳೆದ ಹಲವು ತಿಂಗಳುಗಳಿಂದ ರಸ್ತೆ ಕುಡಿಯುವ ನೀರು ಚರಂಡಿ ಮತ್ತು ಇತರೆ ಮೂಲಭೂತ ಸೌಕರ್ಯಗಳ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಅದೇ ರೀತಿಯಾಗಿ ನಗರದಲ್ಲಿ ಬೀಡಾಡಿ ದನಗಳು ಮತ್ತು ಬೀದಿ ನಾಯಿಗಳ ಹಾವಳಿ ಸಹಾಯ ಹೆಚ್ಚಾಗಿದೆ ಇವುಗಳನ್ನು ಕೂಡಲೇ ನಿರ್ಮೂಲನೆ ಮಾಡಬೇಕೆಂದರು.
ಎಪಿಎಂಸಿ ಮಾರುಕಟ್ಟೆಯಲ್ಲಿನ ವ್ಯಾಪಾರಿಗಳು ಮಾರುಕಟ್ಟೆ ಮೂಲಭೂತ ಸೌಕರ್ಯಗಳ ಅವ್ಯವಸ್ಥೆ ಪ್ರಾಂಗಣದಲ್ಲಿ ಶುಚಿತ್ವದ ಬಗ್ಗೆ, ಕುಡಿಯುವ ನೀರಿನಲ್ಲಿ ಚರಂಡಿ ನೀರು ಮಿಶ್ರವಾಗಿ ಸರಬರಾಜಾಗುತ್ತಿರುವ ಸಮಸ್ಯೆಗಳನ್ನು ಅಲ್ಲಿನ ವ್ಯಾಪಾರಿಗಳು ಸಹಿ ಸಂಗ್ರಹಣ ಸಂದರ್ಭದಲ್ಲಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡರು. ಇದರ ಬಗ್ಗೆ ನಗರ ಪಾಲಿಕೆಯ ನಿರ್ಲಕ್ಷ ಧೋರಣೆಯನ್ನು ಈ ಸಂದರ್ಭದಲ್ಲಿ ಸೋಮಶೇಖರ್ ಗೌಡ ಖಂಡಿಸಿದರು. ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ನಾವು ನಿಮಗೆ ಬೆಂಬಲಿಸುತ್ತೇವೆ ಎಂದು ಸಾರ್ವಜನಿಕರು ಪ್ರತಿಕ್ರಿಯೆ ನೀಡಿದರು.
ಸಹಿ ಸಂಗ್ರಹ ಕಾರ್ಯಕ್ರಮದಲ್ಲಿ ನಾಗರಿಕ ಹೋರಾಟ ಸಮಿತಿಯ ಸದಸ್ಯರಾದ ಗೋವಿಂದ್, ಗುರಳ್ಳಿರಾಜ, ಲಿಂಗರಾಜು ಮುಂತಾದವರು ಭಾಗವಹಿಸಿದ್ದರು.