ರಾಂಚಿ: ನಕ್ಸಲ್ ವಿರೋಧಿ ಕಾರ್ಯಾಚರಣೆಯ ಸಮಯದಲ್ಲಿ ಸಿಡಿಲು ಬಡಿದು 46 ವರ್ಷದ ಸಿಆರ್ಪಿಎಫ್ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ ಮತ್ತು ಇನ್ನು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಗುರುವಾರ ಸಂಜೆ 5:30 ರ ಸುಮಾರಿಗೆ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯ ಕೆರಿಬುರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅರಣ್ಯ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿತ್ತು ಎಂದು ಹೇಳಿದ್ದಾರೆ. 26 ನೇ ಬೆಟಾಲಿಯನ್ಗೆ ಸೇರಿದ ಎರಡನೇ ಕಮಾಂಡ್ ಶ್ರೇಣಿಯ ಅಧಿಕಾರಿ ಎಂ. ಪ್ರಬೋ ಸಿಂಗ್ ಅವರು ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಸಹಾಯಕ ಕಮಾಂಡೆಂಟ್ ಸುಬೀರ್ ಕುಮಾರ್ ಮಂಡಲ್ (49) ಗಾಯಗೊಂಡು ನೊಮುಂಡಿಯ ಟಾಟಾ ಮುಖ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯಲ್ಲಿ ಇಬ್ಬರು ಜಾರ್ಖಂಡ್ ಪೊಲೀಸ್ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಧಿಕಾರಿಗಳ ಪ್ರಕಾರ, ಸಿಡಿಲು ಬಡಿದಾಗ ಎಲ್ಲಾ ಸಿಬ್ಬಂದಿ ಸಿಆರ್ಪಿಎಫ್ ಭದ್ರತಾ ಹೊರಠಾಣೆಯಲ್ಲಿ ಇದ್ದರು. ಮಳೆಯ ಕಾರಣದಿಂದ ತ್ವರಿತ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಯಿತು, ಹೀಗಾಗಿ ಅವರನ್ನು ಸ್ಥಳಾಂತರಿಸಲು ಸಮಯ ತೆಗೆದುಕೊಂಡಿತು ಎಂದು ಅವರು ಹೇಳಿದರು. ಸಿಂಗ್ ಮಣಿಪುರದ ಪಶ್ಚಿಮ ಇಂಫಾಲ್ ಜಿಲ್ಲೆಯವರಾಗಿದ್ದಾರೆ, ಮಂಡಲ್ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಗೆ ಸೇರಿದವರು.
ನಕ್ಸಲ್ ವಿರೋಧಿ ಕಾರ್ಯಾಚರಣೆ ಕರ್ತವ್ಯಕ್ಕಾಗಿ ಅರಣ್ಯ ಪ್ರದೇಶದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಮತ್ತು ಜಾರ್ಖಂಡ್ ಪೊಲೀಸರ ಜಂಟಿ ಪಡೆಗಳನ್ನು ಅಧಿಕಾರಿಗಳು ಮುನ್ನಡೆಸುತ್ತಿದ್ದರು ಎಂದು ಅವರು ಹೇಳಿದರು.