ಮೈಸೂರು, ಅಕ್ಟೋಬರ್ 19: ಮುಡಾ ಹಗರಣ ಸಂಬಂಧ ತನಿಖೆ ಪ್ರಗತಿಯಲ್ಲಿರುವಾಗಲೇ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ವಿರುದ್ಧ ಮತ್ತೊಂದು ಭೂ ಅಕ್ರಮದ ಆರೋಪ ಕೇಳಿಬಂದಿದೆ. ಅಚ್ಚರಿಯೆಂದರೆ, ಅದೂ ಸಹ ಮುಡಾ ಭೂಮಿಗೆ ಸಂಬಂಧಿಸಿದ್ದೇ ಆಗಿದೆ. ಸಿಎಂ ಪತ್ನಿ ವಿರುದ್ಧ ಮೈಸೂರಿನಲ್ಲಿ ಆರ್ಟಿಐ ಕಾರ್ಯಕರ್ತ ಗಂಗರಾಜು ಗಂಭೀರ ಆರೋಪ ಮಾಡಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ 7 ಗುಂಟೆ ಜಾಗವನ್ನು 29-9-2023 ರಂದು ಸಿಎಂ ಪತ್ನಿ ಪಾರ್ವತಿ ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ನಗರದ ಕೆಆರ್ಎಸ್ ರಸ್ತೆಯಲ್ಲಿರುವ ಸರ್ವೇ ನಂಬರ್ 454ರ ಜಾಗ ನೋಂದಾಯಿಸಿಕೊಳ್ಳಲಾಗಿತ್ತು. ಅಲ್ಲಿ ಗಣೇಶ್ ದೀಕ್ಷಿತ್ ಎಂಬುವವರಿಗೆ ಸೇರಿದ 4 ಎಕರೆ 11 ಗುಂಟೆ ಜಾಗವಿತ್ತು. ಅದರಲ್ಲಿ 20 ಗುಂಟೆ ಜಾಗವನ್ನು ಸಿಎಂ ಪತ್ನಿ ಪಾರ್ವತಿ ಖರೀದಿ ಮಾಡಿದ್ದರು.
20 ಗುಂಟೆ ಜಾಗಕ್ಕೆ 1.85 ಕೋಟಿ ರೂಪಾಯಿ ಕೊಟ್ಟು ಖರೀದಿಸಿದ್ದರು. (20 ಗುಂಟೆ) 21,771,99 ಚದರಡಿ ಜಾಗವನ್ನು ನೋಂದಣಿ ಮಾಡಿಸಿಕೊಂಡಿದ್ದರು. ಅದರಲ್ಲಿ 8998 ಚದರಡಿ ಜಾಗವನ್ನು ಗಣೇಶ್ ದೀಕ್ಷಿತ್, ರಸ್ತೆ ಮತ್ತು ಪೈಪ್ ಲೈನ್ಗೆಂದು ಮುಡಾಗೆ ಬಿಟ್ಟುಕೊಟ್ಟಿದ್ದರು. ಮುಡಾಗೆ ಬಿಟ್ಟು ಕೊಟ್ಟ ರಸ್ತೆ ಮತ್ತು ಪೈಪ್ ಲೈನ್ಗೆ ಸೇರಿದ್ದ ಜಾಗವನ್ನು ಕೂಡ ತಮ್ಮ ಹೆಸರಿಗೆ ಸೇರಿಸಿಕೊಂಡು ಪಾರ್ವತಿ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಆರ್ಟಿಐ ಕಾರ್ಯಕರ್ತ ಗಂಗರಾಜು ಆರೋಪಿಸಿದ್ದಾರೆ.
ಆ ವಿಚಾರವಾಗಿ ಆರ್ಟಿಐ ಕಾರ್ಯಕರ್ತರು ಅರ್ಜಿ ಹಾಕುತ್ತಿದ್ದಂತೆಯೇ ಎಚ್ಚೆತ್ತ ಸಿಎಂ ಪತ್ನಿ, 30-8-2024 ಹಾಗೂ 31-08-2024 ರಂದು ಮತ್ತೆ ರಿಜಿಸ್ಟರ್ ತಿದ್ದುಪಡಿ ಮಾಡಿಸಿದ್ದಾರೆ. ಮುಡಾದ ಜಾಗವನ್ನು ಬಿಟ್ಟು ಇನ್ನುಳಿದ 12,782 ಚದರಡಿ ಜಾಗಕ್ಕೆ ಮಾತ್ರ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಗಂಗರಾಜು ಹೇಳಿದ್ದಾರೆ.