ರಾಜ್ಯಪಾಲರು ನೀಡಿರುವ ಶೋಕಾಸ್ ನೋಟಿಸ್​​​ಗೆ ಸಿದ್ದರಾಮಯ್ಯ ಉತ್ತರ!

Ravi Talawar
ರಾಜ್ಯಪಾಲರು ನೀಡಿರುವ ಶೋಕಾಸ್ ನೋಟಿಸ್​​​ಗೆ  ಸಿದ್ದರಾಮಯ್ಯ ಉತ್ತರ!
WhatsApp Group Join Now
Telegram Group Join Now

ಬೆಂಗಳೂರು, ಆಗಸ್ಟ್ 7: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾದಿಂದ ಅಕ್ರಮವಾಗಿ ಸೈಟ್ ಪಡೆದ ಆರೋಪಕ್ಕೆ ಸಂಬಂಧಿಸಿ ರಾಜ್ಯಪಾಲರು ನೀಡಿರುವ ಶೋಕಾಸ್ ನೋಟಿಸ್​​​ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡಿದ್ದಾರೆ. ಉತ್ತರ ನೀಡುವುದರ ಜೊತೆಗೆ‌ ರಾಜ್ಯಪಾಲರಿಗೆ ಸಮರ್ಪಕವಾದ ದಾಖಲೆ ಸಲ್ಲಿಕೆ ಮಾಡಿದ್ದಾರೆ. ಆದರೆ, ಇದು ರಾಜ್ಯಪಾಲರ ನೋಟಿಸ್​​​ಗೆ ಸಚಿವ ಸಂಪುಟದಲ್ಲಿ ತೆಗೆದುಕೊಂಡ ನಿರ್ಣಯವನ್ನು ಒಳಗೊಂಡಿಲ್ಲ.

ಪ್ರತ್ಯೇಕವಾಗಿ, ವೈಯಕ್ತಿಕವಾಗಿ ದಾಖಲೆಗಳ ಸಮೇತ ಸಿಎಂ ಸಿದ್ದರಾಮಯ್ಯ ರಾಜ್ಯಪಾಲರಿಗೆ ವಿವರಣೆ ನೀಡಿದ್ದಾರೆ. ತಮಗೇ ನೇರವಾಗಿ ನೋಟಿಸ್ ನೀಡಿದ ಪರಿಣಾಮ ರಾಜ್ಯಪಾಲರಿಗೆ ಖುದ್ದು ಸಿಎಂ ವಿವರಣೆ ನೀಡಿದ್ದಾರೆ. ಅಲ್ಲದೆ, ರಾಜ್ಯಪಾಲರು ನೋಟಿಸ್​​ನಲ್ಲಿ ಉಲ್ಲೇಖಸಿರುವ ಆರೋಪಗಳನ್ನು ಸಿಎಂ ನಿರಾಕರಿಸಿದ್ದಾರೆ.

ಮುಡಾ ಸೈಟ್ ಹಂಚಿಕೆ ವಿಚಾರದಲ್ಲಿ ನನ್ನ ಪಾತ್ರವಿಲ್ಲ. ಯಾವುದೇ ಪ್ರಭಾವವನ್ನೂ ಬಳಸಿಲ್ಲ. ಕಾನೂನಾತ್ಮಕವಾಗಿಯೇ ಪತ್ನಿಗೆ ಸೈಟ್ ಹಂಚಿಕೆಯಾಗಿದೆ ಎಂದಿರುವ ಸಿದ್ದರಾಮಯ್ಯ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಉತ್ತರದ ಜತೆ ಕಳುಹಿಸಿಕೊಟ್ಟಿದ್ದಾರೆ.

ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​​ಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಕಳೆದ ವಾರ ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಾಹಂ ದೂರು ಸಲ್ಲಿಸಿದ್ದರು. ಇದಾದ ಬಳಿಕ ರಾಜ್ಯಪಾಲರು ಸಿಎಂಗೆ ಶೋಕಾಸ್ ನೋಟಿಸ್ ಕಳುಹಿಸಿದ್ದರು. ಈ ಎಲ್ಲ ಬೆಳವಣಿಗೆ ಮಧ್ಯೆ ಮಂಗಳವಾರ ರಾಜಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೊಹಲೋಟ್​​​ರನ್ನ ಟಿಜೆ ಅಬ್ರಾಹಂ ಭೇಟಿ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‍ಗೆ ರಾಜ್ಯಪಾಲರು ಅನುಮತಿ ನೀಡುವ ವಿಶ್ವಾಸವಿದೆ ಎಂದಿದ್ದಾರೆ.

ಮತ್ತೊಂದೆಡೆ, ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಪ್ರಭಾವ ಬಳಸಿ ಅಕ್ರಮವಾಗಿ ಜಮೀನು ಡಿನೋಟಿಫೈ ಮಾಡಿದ್ದಾರೆಂದು ಆರೋಪಿಸಿ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ದಾಖಲೆ ಸಮೇತ ಸಿಎಂ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಹೀಗಾಗಿ ಪ್ರಕರಣ ಮತ್ತಷ್ಟು ಬಿಗಡಾಯಿಸಿದೆ.

ಈ ಮಧ್ಯೆ, ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಜೆಡಿಎಸ್ ಪಾದಯಾತ್ರೆ ಐದನೇ ದಿನಕ್ಕೆ ಕಾಲಿಟ್ಟಿದೆ. ಐದನೇ ದಿನ ಮಂಡ್ಯದ ಶ್ರೀನಿವಾಸ ಗೇಟ್‌ ಬಳಿಯಿಂದ ಪಾದಯಾತ್ರೆ ಮುಂದುವರಿದಿದೆ.

WhatsApp Group Join Now
Telegram Group Join Now
Share This Article