ಜನರ ಆಶೀರ್ವಾದ ಇರುವವರೆಗೆ ರಾಜಕೀಯದಲ್ಲಿರುತ್ತೇನೆ : ಸಿದ್ದರಾಮಯ್ಯ

Hasiru Kranti
ಜನರ ಆಶೀರ್ವಾದ ಇರುವವರೆಗೆ ರಾಜಕೀಯದಲ್ಲಿರುತ್ತೇನೆ : ಸಿದ್ದರಾಮಯ್ಯ
WhatsApp Group Join Now
Telegram Group Join Now

 

* ನನ್ನ ಆಡಳಿತ ತೃಪ್ತಿ ತಂದಿದೆ

ಹಾವೇರಿ : ಜನವರಿ – 07: ರಾಜಕಾರಣದಲ್ಲಿ ಇರಬೇಕಾದರೆ ಜನರ ಆಶೀರ್ವಾದ ಇರಬೇಕು. ಅವರ ಆಶೀರ್ವಾದದಿಂದ ಇಲ್ಲಿಯವರೆಗೂ ಸಾಗಿ ಬಂದಿದ್ದು, ಜನರ ಆಶೀರ್ವಾದ ಇರುವವರೆಗೆ ರಾಜಕೀಯದಲ್ಲಿರುತ್ತೇನೆ. ನನ್ನ ಆಡಳಿತ ತೃಪ್ತಿ ತಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು .

ಅವರು ಇಂದು ಹಾವೇರಿಯ ಕೊಳ್ಳಿ ಪಾಲಿಟೇಕ್ನಿಕ್ ಆವರಣದ ಹೆಲಿ ಪ್ಯಾಡ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಹಾವೇರಿ ವೈದ್ಯಕೀಯ ಕಾಲೇಜು ಪೂರ್ಣಗೊಂಡಿದ್ದು, ಇದಕ್ಕೆ ಸುಮಾರು 500 ಕೋಟಿಗಳು ವೆಚ್ಚವಾಗಿದೆ. ಇದನ್ನು ನಾನೇ ಘೋಷಣೆ ಮಾಡಿದ್ದೆ ಹಾಗೂ ಉದ್ಘಾಟನೆಯನ್ನು ನಾನೇ ಮಾಡುತ್ತಿದ್ದೇನೆ. ಈಗಾಗಲೇ ಮೂರನೇ ಬ್ಯಾಚ್ ನಡೆಯುತ್ತಿದೆ ಎಂದರು.

ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು : ಸಿದ್ದರಾಮಯ್ಯ ಅವರ ಸರ್ಕಾರ ಬೊಕ್ಕಸ ಖಾಲಿ ಮಾಡಿದೆ ಎಂದು ಬಿಜೆಪಿಯವರು ಮಾಡಿರುವ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂದರು.

ಜಿಎಸ್‌ಟಿ: ರಾಜ್ಯಕ್ಕೆ ಈ ವರ್ಷ 5 ರಿಂದ 6 ಸಾವಿರ ಕೋಟಿ ನಷ್ಟ : ಕೇಂದ್ರ ಸರ್ಕಾರವೇ ಜಿಎಸ್.ಟಿ ಜಾರಿಗೆ ತಂದು ಎಂಟು ವರ್ಷ 24% ತೆರಿಗೆ ಸುಲಿಗೆ ಮಾಡಿ ನಂತರ ನಾವು ತೆರಿಗೆ ಕಡಿಮೆ ಮಾಡಿದ್ದೇವೆ ಎಂದರು. ಕರ್ನಾಟಕ ರಾಜ್ಯವೊಂದಕ್ಕೆ ಒಂದು ವರ್ಷಕ್ಕೆ 10 ರಿಂದ 12 ಸಾವಿರ ಕೋಟಿ ರೂ.ಕಡಿಮೆಯಾಗಿದೆ. ಈ ವರ್ಷ 5 ರಿಂದ 6 ಸಾವಿರ ಕೋಟಿ ನಷ್ಟವಾಗುತ್ತದೆ. ಇದಕ್ಕೆಲ್ಲ ಯಾರು ಹೊಣೆ ಎಂದರು. ನಾಲ್ಕೂವರೆ ಲಕ್ಷ ಕೋಟಿ ತೆರಿಗೆಯನ್ನು ನಾವು ಕೊಡುತ್ತೇವೆ. ನಮಗೆ ಕೊಡುವುದು 60ರಿಂದ 70 ಸಾವಿರ ಕೋಟಿ ಮಾತ್ರ. ಒಂದು ರೂ ಕೊಟ್ಟರೆ 14 ಪೈಸೆ ವಾಪಸ್ಸು ಬರುತ್ತದೆ. ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಕೊಡಲಿಲ್ಲ. 5495 ಕೋಟಿ ರಾಜ್ಯಕ್ಕೆ ಒದಗಿಸಲು 15 ನೇ ಹಣಕಾಸು ಆಯೋಗ ಶಿಫಾರಸು ಮಾಡಿತ್ತು. ಅದನ್ನೂ ಕೊಡಲಿಲ್ಲ. ಪೆರಿಫೆರಲ್ ರಿಂಗ್ ರೋಡಿಗೆ 3000 ಕೋಟಿ, ಬೆಂಗಳೂರಿನ ಕೆರೆಯ ಅಭಿವೃದ್ಧಿಗೆ 3000 ಕೋಟಿ ಕೊಡಲಿಲ್ಲ. ಏನೂ ಕೊಡಲಿಲ್ಲ. ಬಿಜೆಪಿ ನಾಲ್ಕು ವರ್ಷ ಅಧಿಕಾರದಲ್ಲಿದ್ದರೂ ವೈದ್ಯಕೀಯ ಕಾಲೇಜನ್ನು ಏಕೆ ಪೂರ್ಣಗೊಳಿಸಲಿಲ್ಲ? ಇದನ್ನು ನಾವು ಅಧಿಕಾರಕ್ಕೆ ಬಂದು ಪೂರ್ಣಗೊಳಿಸಿದ್ದೇವೆ ಎಂದರು.

ಬಳ್ಳಾರಿ ಪ್ರಕರಣ: ಬ್ಯಾನರ್ ಬಿಚ್ಚಿ ಹಾಕಿದ್ದು ಪ್ರಚೋದನೆ : ಬಳ್ಳಾರಿ ಪ್ರಕರಣವನ್ನು ಸಿಬಿಐಗೆ ಹಸ್ತಾಂತರ ಮಾಡಬೇಕೆಂದು ಜನಾರ್ದನ ರೆಡ್ಡಿ ಶ್ರೀರಾಮುಲು ಸೇರಿದಂತೆ ಅನೇಕರು ಒತ್ತಾಯಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ನಿನ್ನೆ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರು ಭೇಟಿ ನೀಡಿ ಮಾತನಾಡಿದ್ದಾರೆ. ಬಳ್ಳಾರಿಯಲ್ಲಿ ಗಲಾಟೆಯಾಗಿ ಒಬ್ಬ ವ್ಯಕ್ತಿ ಸಾಯಲು ಬ್ಯಾನರ್ ನ್ನು ಬಿಚ್ಚಿಹಾಕಿದ್ದು ಪ್ರಚೋದನೆ. ಬಿಜೆಪಿಯವರಿಗೆ ಅಸೂಯೆ ತಡೆಯಲು ಆಗುತ್ತಿಲ್ಲ ಎಂದರು.

ಕಾನೂನು ಕೈಗೆತ್ತಿಕೊಂಡವರ ಮೇಲೆ ಕ್ರಮ : ಹುಬ್ಬಳ್ಳಿಯಲ್ಲಿ ಮಹಿಳೆಯ ವಿವಸ್ತ್ರಗೊಳಿಸಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಸುಜಾತ ಹಂಡೆ ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಲು ಹೋಗಿದ್ದ ಸಂದರ್ಭದಲ್ಲಿ ಮಹಿಳೆಯೇ ಸ್ವತಃ ವಿವಸ್ತ್ರಗೊಂಡು ಮಹಿಳಾ ಪೊಲೀಸರನ್ನು ಕಚ್ಚಿದ್ದಾರೆ. ಆಕೆಯ ಮೇಲೆ ಎಫ್ಐಆರ್ ಆಗಿದ್ದು , ಪೊಲೀಸರು ವಿಚಾರಣೆಗೆ ಹೋಗಿದ್ದ ಸಂದರ್ಭದಲ್ಲಿ ಅವರನ್ನೇ ಕಚ್ಚಿದ್ದಾರೆ. ಹತ್ತು ಜನಕ್ಕೂ ಹೆಚ್ಚು ಮಹಿಳಾ ಪೊಲೀಸರಿದ್ದರು. ಕಾನೂನನ್ನು ಯಾರೂ ಕೈಗೆ ತೆಗೆದುಕೊಳ್ಳಬಾರದು. ಹಾಗೆ ಮಾಡಿದವರ ಮೇಲೆ ಕಾನೂನಿನ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಅನ್ನಭಾಗ್ಯ ಯೋಜನೆಯನ್ನು ಅನೇಕರು ವ್ಯಾಪಾರ ಮಾಡಿಕೊಂಡಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಯೋಜನೆ ಅಡಿ 5 ಕೆ.ಜಿ ಅಕ್ಕಿಯ ಜೊತೆಗೆ ಬೇರೆ ಪದಾರ್ಥಗಳನ್ನು ಕೊಡಲು ತೀರ್ಮಾನಿಸಲಾಗಿದೆ ಎಂದರು.

ಮುಖ್ಯಮಂತ್ರಿಗಳಾಗಿ ದೀರ್ಘಾವಧಿ ಆಗಿದೆ , ಪೂರ್ಣಾವಧಿಯಾಗುತ್ತದೆಯೇ ಎಂಬ ಪ್ರಶ್ನೆಗೆ ಪಕ್ಷದ ವರಿಷ್ಠರು ಅದನ್ನು ತೀರ್ಮಾನಿಸುತ್ತಾರೆ ಎಂದರು.

WhatsApp Group Join Now
Telegram Group Join Now
Share This Article