ಬೆಂಗಳೂರು: ಅಧಿವೇಶನದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮ ಮತ್ತು ಮುಡಾ ಪ್ರಕರಣದ ಬಗ್ಗೆ ಪ್ರತಿಪಕ್ಷಗಳ ಆರೋಪಕ್ಕೆ ರಕ್ಷಣಾತ್ಮಕವಾಗಿರುವ ಬದಲು ಪ್ರಬಲವಾಗಿ ಎದಿರೇಟು ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರು ಮತ್ತು ಶಾಸಕರಿಗೆ ಸೂಚನೆ ನೀಡಿದ್ದಾರೆ.
ಗುರುವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ”ಸದನದಲ್ಲಿ ಪ್ರತಿಪಕ್ಷಗಳ ವಾಗ್ದಾಳಿಗೆ ಗಟ್ಟಿಯಾಗಿ ಪ್ರತ್ಯುತ್ತರ ನೀಡಬೇಕು. ನಾವು ಬಿಜೆಪಿ ಹೇಳಿದ್ದನ್ನು ಕೇಳಿಕೊಂಡು ಕೂತಿದ್ದೇವೆ. ಈ ವಾರ ಡಿಫೆನ್ಸಿವ್ ಆಗಿ ಮುಂದುವರೆದಿದ್ದು ಸಾಕು. ಇನ್ಮುಂದೆ ನೇರಾನೇರ ಬಿಜೆಪಿಗೆ ಟಕ್ಕರ್ ಕೊಡಬೇಕು. ಬಿಜೆಪಿಯವರು ಹೇಳಿದ್ದನ್ನು ಕೇಳಿಕೊಂಡು ಕೂರಲು ನಾವು ಸದನಕ್ಕೆ ಹೋಗುವುದಲ್ಲ. ಎಲ್ಲ ಶಾಸಕರು ಸಚಿವರ ಹಾಜರಾತಿ ಕಡ್ಡಾಯ. ಬಿಜೆಪಿಯ ಲೋಪದೋಷಗಳನ್ನು ಎತ್ತಿ ಹಿಡಿದು ತೋರಿಸಬೇಕು” ಎಂದು ಸಲಹೆ ಕೊಟ್ಟಿದ್ದಾರೆ.
ಮುಡಾ ಪ್ರಕರಣ ಸಂಬಂಧ ಸಭೆಯಲ್ಲಿ ಸ್ಪಷ್ಟನೆ ನೀಡಿದ ಸಿಎಂ, ”ಬಿಜೆಪಿ ಮತ್ತು ಜೆಡಿಎಸ್ ನಾಯಕರು ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ಈ ಪ್ರಕರಣದಲ್ಲಿ ಕಾನೂನಾತ್ಮಕವಾಗಿ ಯಾವುದೇ ತೊಂದರೆ ಇಲ್ಲ. ಆದರೂ, ಉದ್ದೇಶಪೂರ್ವಕವಾಗಿ ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ. ಮುಡಾದಲ್ಲಿ ನಮ್ಮ ಕುಟುಂಬ ಯಾವುದೇ ಅಕ್ರಮ ಎಸಗಿಲ್ಲ. ಕಾನೂನು ವ್ಯಾಪ್ತಿ ಮೀರಿ ನಾವು ಎಲ್ಲೂ, ಏನೂ ಮಾಡಿಲ್ಲ” ಎಂದರು.