ಮೈಸೂರು, ಆಗಸ್ಟ್.07: ಮುಡಾದಿಂದ ಸಿಎಂ ಬದಲಿ ನಿವೇಶನ ಪಡೆದಿರುವ ವಿಚಾರಕ್ಕೆ ಸಂಬಂಧಿಸಿ ಬದಲಿ ಭೂಮಿ ಕೊಡುವುದು ಬೇಡ ಎಂದು ನಾನು ಹೇಳಿದ್ದೆ ಎಂದು ಮೈಸೂರು ನಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸ್ಪಷ್ಟನೆ ನೀಡಿದ್ದಾರೆ. ನನ್ನ ಪತ್ನಿ ಬದಲಿ ನಿವೇಶನಕ್ಕೆ ಅರ್ಜಿ ಕೊಟ್ಟಾಗ ನಾನು ಸಿಎಂ ಆಗಿದ್ದೆ. ಸಿಎಂ ಆಗಿರುವ ತನಕ ಬದಲಿ ಭೂಮಿ ಕೊಡಬೇಡಿ ಎಂದು ನಾನು ಹೇಳಿದ್ದೆ. ಪ್ರಭಾವ ಬಳಸುವುದಿದ್ದರೆ ಅಂದೇ ಬಳಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸಿಎಂ ಆಗಿ ಕೊಡಲು ಆಗಿತ್ತಿರಲಿಲ್ಲವಾ? ಬದಲಿ ಸೈಟ್ಗೆ ಮತ್ತೆ ನನ್ನ ಪತ್ನಿ 2021ರಲ್ಲಿ ಅರ್ಜಿ ಹಾಕಿದಾಗ ಬಿಜೆಪಿ ಸರ್ಕಾರ ಕಾನೂನಾತ್ಮಕವಾಗಿ ಭೂಮಿ ನೀಡಿದೆ. ಮುಡಾ ವಿಚಾರದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ, ಪ್ರಭಾವ ಬಳಸಿಲ್ಲ. ಬಿಎಸ್ಯಡಿಯೂರಪ್ಪ ಜೈಲಿಗೆ ಹೋಗಿದ್ದ ಪ್ರಕರಣವೇ ಬೇರೆ ಇದೇ ಬೇರೆ. ಯಡಿಯೂರಪ್ಪ ಡಿನೋಟಿಫೈ ಮಾಡಿದ್ದರು. ಚೆಕ್ ಮೂಲಕ ಹಣ ಪಡೆದಿದ್ದರು. ಇಲ್ಲಿ ನಾನು ಯಾವುದೇ ಹಣ ಪಡೆದಿಲ್ಲ ಪ್ರಭಾವ ಬೀರಿಲ್ಲ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಇನ್ನು ಇದೇ ವೇಳೆ ಸಿಎಂ ಸಿದ್ದರಾಮಯ್ಯ ವಿರೋಧ ಪಕ್ಷಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಆಪರೇಷನ್ ಕಮಲ ಮಾಡಲು ಪ್ರಯತ್ನಿಸಿದ್ರು ಆಗಲಿಲ್ಲ. ಈಗ ಬಿಜೆಪಿ-ಜೆಡಿಎಸ್ ಸೇರಿ ಸರ್ಕಾರ ಅಸ್ಥಿರಗೊಳಿಸಲು ಯತ್ನ ನಡೆಯುತ್ತಿದೆ. ನಮ್ಮ ಸರ್ಕಾರ ಬಡವರ ಪರ ಕೆಲಸ ಮಾಡುತ್ತಿದೆ. ಹೀಗಾಗಿ ನಮ್ಮ ಸರ್ಕಾರದ ಬಗ್ಗೆ ಬಿಜೆಪಿ-ಜೆಡಿಎಸ್ಗೆ ಭಯವಿದೆ. ಗ್ಯಾರಂಟಿಗಳನ್ನು ನಿಲ್ಲಿಸುತ್ತಾರೆಂದು ಸುಳ್ಳು ಹೇಳಿಕೆ ನೀಡಿದ್ರು, ನಾವು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿದ್ದೇವ ಹೇಳಲಿ. ಬಡವರ ಪರ ನಮ್ಮ ಸರ್ಕಾರ ಕೆಲಸ ಮಾಡುತ್ತಿರುವುದಕ್ಕೆ ಅವರಿಗೆ ಭಯವಿದೆ. ಹೀಗಾಗಿ ಬಿಜೆಪಿ-ಜೆಡಿಎಸ್ ನಮ್ಮ ಸರ್ಕಾರ ಅಸ್ಥಿರಗೊಳಿಸಲು ಯತ್ನಿಸುತ್ತಿದೆ ಎಂದರು.