ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತದಿಂದ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಹೊಸ ಸ್ಟೇಡಿಯಂ ನಿರ್ಮಾಣಕ್ಕೆ ಮುಂದಾಗಿದೆ.
ಬೆಂಗಳೂರಿನ ಬೊಮ್ಮಸಂದ್ರದ ಸೂರ್ಯ ನಗರದಲ್ಲಿ 80,000 ಆಸನ ಸಾಮರ್ಥ್ಯದ ಕ್ರಿಕೆಟ್ ಕ್ರೀಡಾಂಗಣ ಹೊಂದಿರುವ ವಿಶ್ವ ದರ್ಜೆಯ ಕ್ರೀಡಾ ಸಂಕೀರ್ಣವನ್ನು ನಿರ್ಮಿಸುವ ಕರ್ನಾಟಕ ವಸತಿ ಮಂಡಳಿ(ಕೆಎಚ್‌ಬಿ)ಯ ಪ್ರಸ್ತಾವನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಅನುಮೋದನೆ ನೀಡಿದ್ದಾರೆ.
ಬೊಮ್ಮಸಂದ್ರದಲ್ಲಿ ತಲೆ ಎತ್ತಲಿರುವ ಈ ಸ್ಟೇಡಿಯಂ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದ ನಂತರ ಭಾರತದ ಎರಡನೇ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಲಿದೆ. ನರೇಂದ್ರ ಮೋದಿ ಸ್ಟೇಡಿಯಂ 1,32,000 ಪ್ರೇಕ್ಷಕರಿಗೆ ಸ್ಥಳಾವಕಾಶ ಕಲ್ಪಿಸುತ್ತದೆ.
ಒಟ್ಟು 1,650 ಕೋಟಿ ರೂಪಾಯಿ ಯೋಜನೆಗೆ ರಾಜ್ಯ ಸರ್ಕಾರದ ಆರ್ಥಿಕ ಬೆಂಬಲವಿಲ್ಲದೆ ಕೆಎಚ್‌ಬಿ ಸಂಪೂರ್ಣವಾಗಿ ಹಣವನ್ನು ನೀಡುತ್ತದೆ. ಪ್ರಸ್ತಾವಿತ ಕ್ರೀಡಾ ಸಂಕೀರ್ಣ 100 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿದ್ದು, ಇದು ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳಿಗೆ ಅವಕಾಶ ಕಲ್ಪಿಸುತ್ತದೆ.