ಬೆಂಗಳೂರು: ಇಸ್ರೋ ಹಾಗೂ ಜೆಎನ್‌ಪಿ ಸಹಯೋಗದಲ್ಲಿ ಶೀಘ್ರದಲ್ಲೇ ಜವಾಹರಲಾಲ್ ನೆಹರು ತಾರಾಲಯದ ಯು.ಆರ್.ರಾವ್ ಭವನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಗಗನಯಾತ್ರಿ, ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರೊಂದಿಗೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ ಆಯೋಜಿಸಲಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು ತಿಳಿಸಿದರು.
ಈ ಬಗ್ಗೆ ಸೋಮವಾರ ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಆಕ್ಸಿಯಂ-4 ಮಿಷನ್‌ನ ಅಂತರಿಕ್ಷ ಯಾತ್ರಿಕರಾದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಲು ಇಸ್ರೋ ಅಧ್ಯಕ್ಷ ಡಾ.ವಿ.ನಾರಾಯಣ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಸಂವಾದ ಕಾರ್ಯಕ್ರಮ ಶೀಘ್ರದಲ್ಲೇ ಜವಾಹರಲಾಲ್ ನೆಹರು ಪ್ಲಾನೆಟೇರಿಯಂನ ಯು.ಆರ್.ರಾವ್ ಭವನದಲ್ಲಿ ನಡೆಯಲಿದೆ. ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಹೈಸ್ಕೂಲ್ ಹಾಗೂ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ನೇರವಾಗಿ ಅಂತರಿಕ್ಷ ಯಾತ್ರಿಕರೊಂದಿಗೆ ಸಂವಾದಿಸಲು ಇದು ಅವಕಾಶ ಕಲ್ಪಿಸಲಿದೆ. ರಾಜ್ಯದ ಇನ್ನಿತರೆ ಭಾಗಗಳ ವಿದ್ಯಾರ್ಥಿಗಳು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಾದೇಶಿಕ ವಿಜ್ಞಾನ ಕೇಂದ್ರಗಳಲ್ಲಿ ಲೈವ್ ಸ್ಟ್ರೀಮಿಂಗ್ ಮೂಲಕ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.