ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರ ಮೇಲೆ ವಸ್ತು ಎಸೆದ ಘಟನೆ ಖಂಡಿಸಿ ಅಖಿಲ ಭಾರತ ವಕೀಲರ ಸಂಘ ಇಂದು ಸುಪ್ರೀಂ ಕೋರ್ಟ್ ಮುಂದೆ ಪ್ರತಿಭಟನೆ ನಡೆಸಲಿದೆ.
ಸೋಮವಾರ ನ್ಯಾಯಾಲಯದ ಆವರಣದಲ್ಲಿ ನಡೆದ ಘಟನೆಯನ್ನು ಹಿರಿಯ ವಕೀಲರು ಮತ್ತು ರಾಜಕೀಯ ಮುಖಂಡರೂ ವ್ಯಪಕವಾಗಿ ಖಂಡಿಸಿದ್ದಾರೆ. ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್ ಆನ್ ರೆಕಾರ್ಡ್ ಅಸೋಸಿಯೇಷನ್ ಮತ್ತು ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ ಈ ಘಟನೆಯನ್ನು ಸುಪ್ರೀಂ ಕೋರ್ಟ್ ಮತ್ತು ನ್ಯಾಯಾಂಗದ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಕರೆದಿವೆ.
ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರು ಮತ್ತು ಅಖಿಲ ಭಾರತ ವಕೀಲರ ಒಕ್ಕೂಟದ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಪಿ.ವಿ. ಸುರೇಂದ್ರ ನಾಥ್ ಅವರು ಈ ಘಟನೆಯನ್ನು ಸುಪ್ರೀಂ ಕೋರ್ಟ್ ಮತ್ತು ನ್ಯಾಯಾಂಗದ ಮೇಲಿನ ದಾಳಿಯಾಗಿದೆ. ಇದು ನಾಥುರಾಮ್ ಗೋಡ್ಸೆ ಮನಸ್ಥಿತಿಯದ್ದಾಗಿದ್ದು, ಇದನ್ನು ಸಹಿಸಲು ಸಾಧ್ಯವಿಲ್ಲ. ಘಟನೆ ಬಗ್ಗೆ ಸಂಪೂರ್ಣ ತನಿಖೆ ನಡೆಸಿ, ಆರೋಪಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಸುಪ್ರೀಂ ಕೋರ್ಟ್ನಲ್ಲಿ ಸಿಜೆಐ ನೇತೃತ್ವದ ಪೀಠದ ಮುಂದೆ ಪ್ರಕರಣಗಳ ಪ್ರಸ್ತಾಪದ ಸಮಯದಲ್ಲಿ ವಕೀಲ ರಾಕೇಶ್ ಈ ರೀತಿ ಕೃತ್ಯ ನಡೆಸಲು ಮುಂದಾದರು. ಈ ವೇಳೆ ಭದ್ರತಾ ಸಿಬ್ಬಂದಿಯ ಮುನ್ನೆಚ್ಚರಿಕೆ ಕ್ರಮದಿಂದ ಅವರನ್ನು ತಡೆದರು.