ಕಾರವಾರ, ಏಪ್ರಿಲ್ 9: ಬಾಗಿಲು ತೆರೆದಿದ್ದ ಮನೆ, ಒಳಗೆ ಹಣ್ಣು – ತರಕಾರಿ ರೀತಿಯಲ್ಲಿ ಬಿದ್ದಿರುವ ಕಂತೆ ಕಂತೆ ನೋಟುಗಳು. ವಿಷಯ ತಿಳಿದು ಮನೆಯಿಂದ ಹೊರ ಬಾರದ ಜನರು. ಇಂಥದ್ದೊಂದು ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರದ ಗಾಂಧಿನಗರ ಬಡಾವಣೆ. ಗಾಂಧಿನಗರದ ನೂರಜಾನ್ ಜುಂಜುವಾಡ್ಕರ ಎಂಬವವರ ಮನೆಯೊಂದರಲ್ಲಿ ಗೋವಾ (Goa) ಮೂಲದ ಅರ್ಷದ್ ಖಾನ್ ಎಂಬಾತ ಬಾಡಿಗೆದಾರನಾಗಿ ವಾಸ್ತವ್ಯವಿದ್ದ. ಕಳೆದ ಒಂದು ತಿಂಗಳಿನಿಂದ ಈತ ಆ ಮನೆಯಲ್ಲಿ ಇಲ್ಲದೇ ಇರುವುದನ್ನು ಗಮನಿಸಿ ಮತ್ತು ಆ ಮನೆಯ ಹಿಂಬದಿಯ ಬಾಗಿಲ ಚಿಲಕ ಸರಿ ಹಾಕದೇ ಇರುವುದನ್ನು ತಿಳಿದು, ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು.
ದಾಂಡೇಲಿ ನಗರ ಠಾಣೆಯ ಪೊಲೀಸರು ಮನೆಗೆ ಬಂದು ಬಾಗಿಲು ತೆರೆಯುತ್ತಿದ್ದಂತೆಯೇ, 500 ರೂ. ಮುಖ ಬೆಲೆಯ ಕಂತೆ ಕಂತೆ ನೋಟುಗಳು ಕಾಣಿವೆ. ಒಮ್ಮೆಲೇ ದಂಗಾದ ಪೊಲೀಸರು ಸ್ಥಳಕ್ಕೆ ಹಿರಿಯ ಪೊಲೀಸರನ್ನು ಕರೆಸಿದ್ದಾರೆ. ಕೂಡಲೇ ಮನೆ ಮಾಲೀಕರುವ ಬಾಡಿಗೆ ಮನೆಯಲ್ಲಿ ವಾಸವಿದ್ದ ವ್ಯಕ್ತಿಗೆ ಕರೆ ಮಾಡಿದ್ದಾರೆ. ಆತ ಬೇರೆ ಕಡೆ ಇದ್ದಿದ್ದರಿಂದ ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗಿನ ಜಾವದ ವರೆಗೆ ನೋಟನ್ನು ತಮ್ಮ ಸುಪರ್ದಿಯಲ್ಲಿ ಇಟ್ಟಕೊಂಡಿದ್ದಾರೆ.
ಕೋಟಿಗಟ್ಟಲೇ ನಕಲಿ ನೋಟು ಸಿಕ್ಕಿರುವ ಸಂಬಂಧ ಆ ಮನೆಯಲ್ಲಿ ಬಾಡಿಗೆದಾರನಾಗಿದ್ದ ಅರ್ಷದ್ ಖಾನ್ನನ್ನು ವಶಕ್ಕೆ ಪಡೆಯಲು ದಾಂಡೇಲಿ ಪೊಲೀಸರು ಕ್ರಮ ಆರಂಭಿಸಿದ್ದಾರೆ. ಈಗಾಗಲೇ ಅರ್ಷದ್ ಖಾನ್ನನ್ನು ಪೊಲೀಸರು ಸಂಪರ್ಕಿಸಿದ್ದು, ಆತ ಗೋವಾದಲ್ಲಿ ಇದ್ದು ಬರುವುದಾಗಿ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ. ಈ ಹಿಂದೆ ಸಹ ದಾಂಡೇಲಿಯಲ್ಲಿ ನಕಲಿ ಕರೆನ್ಸಿ ನೋಟು ಪತ್ತೆಯಾಗಿದ್ದು ಸದ್ದು ಮಾಡಿತ್ತು. ಸದ್ಯ ಮತ್ತೆ ಕೋಟಿಗಟ್ಟಲೇ ನಕಲಿ ನೋಟು ಪತ್ತೆಯಾಗಿದ್ದು, ಇದರ ಹಿಂದಿನ ಅಸಲಿ ಸತ್ಯವಾದರೂ ಏನು ಎಂಬ ಚರ್ಚೆ ಸಾರ್ವಜನಿಕರಲ್ಲಿ ಜೋರಾಗಿದೆ.