ಅಥಣಿ : ಭಾರತದ ಸ್ವಾತಂತ್ರ್ಯ ಸಂಗ್ರಾಮದ ವೇಳೆ ನಮ್ಮ ನಾಡಿನ ಕಿತ್ತೂರು ಸಂಸ್ಥಾನದ ವೀರರಾಣಿ ಚೆನ್ನಮ್ಮ ಬ್ರಿಟಿಷರ ಆಡಳಿತದ ವಿರುದ್ಧ ಹೋರಾಟಕ್ಕೆ ನಾಂದಿ ಹಾಡುವ ಮೂಲಕ ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ ಎನಿಸಿಕೊಂಡಿದ್ದಾಳೆ. ಆಕೆಯ ದೇಶಭಕ್ತಿಯ ಕಿಚ್ಚು ನಮ್ಮೆಲ್ಲರಿಗೆ ಪ್ರೇರಣೆಯಾಗಬೇಕು ಎಂದು ಪುರಸಭೆಯ ಅಧ್ಯಕ್ಷೆ ಶಿವಲೀಲಾ ಬುಟಾಳಿ ಹೇಳಿದರು.
ಅವರು ಅಥಣಿ ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ತಾಲೂಕ ಆಡಳಿತದಿಂದ ವೀರರಾಣಿ ಕಿತ್ತೂರು ಚೆನ್ನಮ್ಮ ವೀರಜ್ಯೋತಿ ಯಾತ್ರೆಯ ಭವ್ಯ ಸ್ವಾಗತ ಕಾರ್ಯಕ್ರಮದಲ್ಲಿ ಜ್ಯೋತಿಗೆ ಪೂಜಿ ಸಲ್ಲಿಸಿ ಮಾತನಾಡಿದರು. ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಕಿತ್ತೂರು ಸಂಸ್ಥಾನದ ಕೊಡುಗೆ ಅಪಾರವಾಗಿದ್ದು, ವೀರರಾಣಿ ಕಿತ್ತೂರು ಚೆನ್ನಮ್ಮ ಹಾಗೂ ಅವಳ ಬಲಗೈ ಬಂಟ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಅವರ ದೇಶಪ್ರೇಮ ಮತ್ತು ಶೌರ್ಯ ಇಂದಿನ ಯುವ ಜನಾಂಗಕ್ಕೆ ಪ್ರೇರಣೆಯಾಗಬೇಕು ಎಂದರು.
ತಾಲೂಕಾ ತಹಶೀಲ್ದಾರ ಸಿದ್ದರಾಯ ಬೋಸಗಿ ಮಾತನಾಡಿ ಕಿತ್ತೂರು ಸಂಸ್ಥಾನವನ್ನು ಉಳಿಸಿಕೊಳ್ಳಲು ಬ್ರಿಟಿಷರ ಆಡಳಿತದ ವಿರುದ್ಧ ಸಿಡಿದಿದ್ದ ವೀರರಾಣಿ ಚೆನ್ನಮ್ಮ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಕಾಯ್ದೆ ಜಾರಿ ಮಾಡಿದ ಬ್ರಿಟಿಷ್ ಅಧಿಕಾರಿ ಥ್ಯಾಕರೆ ವಿರುದ್ಧ ಸಮರವನ್ನು ಸಾರಿ ಮೊದಲ ವಿಜಯಮಾಲೆ ಧರಿಸಿದಳು. ಈ ವಿಜಯದ ಸಂಕೇತವಾಗಿ ಪ್ರತಿವರ್ಷ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮೂರು ದಿನಗಳ ಕಾಲ ಕಿತ್ತೂರು ಉತ್ಸವವನ್ನು ಆಚರಿಸಲಾಗುತ್ತದೆ. ಬರುವ ದಿ. 23, 24 ಮತ್ತು 25 ರಂದು ಮೂರು ದಿನಗಳ ಕಾಲ ಈ ಕಾರ್ಯಕ್ರಮ ಸಂಭ್ರಮದಿಂದ ಜರುಗುತ್ತದೆ. ತಾಲೂಕಿನ ಜನರು ಕೂಡ ಈ ಉತ್ಸವದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆರಂಭವಾದ ಕಿತ್ತೂರು ಉತ್ಸವದ ಜ್ಯೋತಿಯಾತ್ರೆಯನ್ನು ವಿವಿಧ ವಾದ್ಯ ಮೇಳಗಳೊಂದಿಗೆ ಡಾ. ಬಿ ಆರ್ ಅಂಬೇಡ್ಕರ್ ವೃತ್ತದ ಮೂಲಕ ಮೆರವಣಿಗೆಯ ಮೂಲಕ ಆಗಮಿಸಿ ವೀರರಾಣಿ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಶಿವಯೋಗಿ ವೃತ್ತದ ಮೂಲಕ ಜ್ಯೋತಿ ಯಾತ್ರೆಯನ್ನು ರಾಯಬಾಗ ತಾಲೂಕಿಗೆ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಪುರಸಭೆಯ ಉಪಾಧ್ಯಕ್ಷ ಭುವನೇಶ್ವರಿ ಯಕ್ಕಂಚಿ, ಮುಖಂಡರಾದ ಸದಾಶಿವ ಬುಟಾಳಿ, ರಾಮನಗೌಡ ಪಾಟೀಲ, ಅವಿನಾಶ ನಾಯಕ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ, ಪಿಎಸ್ಐ ಗಿರಿಮಲ್ಲಪ್ಪ ಉಪ್ಪಾರ, ಅಭಿಯಂತರ ಪ್ರವೀಣ ಪಾಟೀಲ, ತಾಲೂಕ ವೈದ್ಯಾಧಿಕಾರಿ ಡಾ.ಬಸಗೌಡ ಕಾಗೆ, ಸಿ ಡಿ ಪಿ ಓ ಮಂಜುನಾಥ , ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಆರ್ ಮುಂಜೆ,ಶಬ್ಬೀರ ಸಾತಬಚ್ಚೆ,ಮಂಜು ಹೋಳಿಕಟ್ಟಿ,ಅಣ್ಣಾಸಾಹೇಬ ತೇಲಸಂಗ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಕನ್ನಡ ಪರ ಸಂಘಟನೆಯ ಮುಖಂಡರು, ಅಂಗನವಾಡಿ ಕಾರ್ಯಕರ್ತೆಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಫೋಟೋ : ಅಥಣಿ ಪಟ್ಟಣದಲ್ಲಿ ತಾಲೂಕ ಆಡಳಿತದಿಂದ ಕಿತ್ತೂರು ಉತ್ಸವದ ಚೆನ್ನಮ್ಮ ಜ್ಯೋತಿ ಯಾತ್ರೆಯನ್ನು ತಹಶೀಲ್ದಾರ್ ನೇತೃತ್ವದಲ್ಲಿ ಸಂಭ್ರಮದಿಂದ ಬರಮಾಡಿಕೊಂಡು ರಾಯಬಾಗ ತಾಲೂಕಿಗೆ ಬೀಳ್ಕೊಡಲಾಯಿತು.
(16 ಅಥಣಿ 01)