ಉದ್ಯಮಿ ರಾಜ್ ಕುಂದ್ರಾಒಂದರ ಹಿಂದೊಂದರಂತೆ ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಲೇ ಇದ್ದಾರೆ. ಬೆಟ್ಟಿಂಗ್ ಪ್ರಕರಣ, ಅದಾದ ಬಳಿಕ ವಂಚನೆ ಪ್ರಕರಣ, ಅದರ ಬಳಿಕ ನೀಲಿ ಚಿತ್ರ ನಿರ್ಮಾಣ ಮತ್ತು ಹಂಚಿಕೆ ಪ್ರಕರಣ ಈಗ 60 ಕೋಟಿ ರೂಪಾಯಿ ವಂಚನೆ ಪ್ರಕರಣ ರಾಜ್ ಕುಂದ್ರಾ ಮೇಲಿದೆ. ಪ್ರಕರಣದಲ್ಲಿ ನಟಿ ಶಿಲ್ಪಾ ಶೆಟ್ಟಿ ಹೆಸರೂ ಸಹ ಕೇಳಿ ಬಂದಿದ್ದು, ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸ್ನ ಆರ್ಥಿಕ ವಿಭಾಗದ ಪೊಲೀಸರು ಶಿಲ್ಪಾ ಶೆಟ್ಟಿಗೆ ನೋಟೀಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ರಾಜ್ ಕುಂದ್ರಾ ಆರೋಪಿಯಾಗಿರುವ 60 ಕೋಟಿ ರೂಪಾಯಿ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಆ ಹಣದಲ್ಲಿ 15 ಕೋಟಿ ಹಣವನ್ನು ರಾಜ್ ಕುಂದ್ರಾ, ನಟಿ ಶಿಲ್ಪಾ ಶೆಟ್ಟಿಯ ಮಾಲೀಕತ್ವದ ಕಂಪೆನಿಗೆ ವರ್ಗಾವಣೆ ಮಾಡಿರುವುದು ಪತ್ತೆ ಮಾಡಿದ್ದಾರೆ. ನಟಿ ಶಿಲ್ಪಾ ಶೆಟ್ಟಿ ಆ ಹಣವನ್ನು ಕಂಪೆನಿಯ ಬೇರೆ ಬೇರೆ ಉದ್ದೇಶಗಳಿಗೆ ಖರ್ಚು ಮಾಡಿದ್ದಾರೆ. ಇದೀಗ ಪೊಲೀಸರು ಶಿಲ್ಪಾ ಶೆಟ್ಟಿಗೆ ನೊಟೀಸ್ ನೀಡಿದ್ದು, ಅವರ ಕಂಪೆನಿಯ ಖರ್ಚು ವೆಚ್ಚ, ಜಾಹೀರಾತು ಖರ್ಚು ಇತ್ಯಾದಿಗಳ ಬಗ್ಗೆ ಪ್ರಶ್ನೆಗಳನ್ನು ಮಾಡಿ ಉತ್ತರಗಳನ್ನು ಪಡೆದುಕೊಳ್ಳಲಿದ್ದಾರೆ.