ಮಗಳೆಂಬ ಮಮಕಾರಕ್ಕೆ ಜೀವ ಕೊಟ್ಟವಳು…….!!
ಸಂಬಂಧಗಳು ರಕ್ತದಿಂದ ಹುಟ್ಟುತ್ತವೆ. ಆದರೆ ನಮ್ಮವರೆಂಬ ಭಾವನೆ ಮೂಡಬೇಕಾದರೆ ರಕ್ತಸಂಬಂಧಕ್ಕಿಂತ ಹೆಚ್ಚಾಗಿ ಮನಸಿನ ಸಂಬಂಧವೇ ಮುಖ್ಯವಾಗುತ್ತದೆ. ರಕ್ತಸಂಬಂಧಿಗಳು ಕೆಲವೊಮ್ಮೆ ಅವಶ್ಯಕತೆ ಇದ್ದಾಗಲೇ ಕೈಕೊಡಬಹುದು, ಅಸೂಯೆ ಪಡಬಹುದು, ನಮ್ಮ ಏಳಿಗೆಯನ್ನು ಸಹಿಸದೇ ಇರಬಹುದು. ಆದರೆ ಮನಸಿನಿಂದ ಉಂಟಾದ ಆತ್ಮ ಸಂಬಂಧಿಗಳು ಯಾವತ್ತೂ ನಮ್ಮ ಸುಖ ದುಃಖದಲ್ಲಿ ಸಮನಾಗಿ ಭಾಗಿಯಾಗಿ, ನಮ್ಮನ್ನು ತಿದ್ದಿ ತೀಡಿ, ನಮ್ಮ ಬದುಕಿಗೆ ಧೈರ್ಯ ತುಂಬಿ ನಾವು ಸಾಧನೆ ಮಾಡಲು ಕೈಜೋಡಿಸುತ್ತಾರೆ. ಆಗ ನಮಗೆ ಅರಿವಾಗುವುದೇನೆಂದರೆ ಸಂಬಂಧಗಳು ರಕ್ತದಿಂದ ಬರುವುದಿಲ್ಲ, ಬದಲಾಗಿ ಅವು ಆತ್ಮೀಯತೆಯಿಂದ ಬರುತ್ತವೆ ಎಂದು…!
ನಮಗೆ ಯಾರೋ ಒಬ್ಬರು ತೋರುವ ಅತಿಯಾದ ಕಾಳಜಿ, ಪ್ರೀತಿಗಳು ಅವರ ಮನಸಿನಲ್ಲಿ ಸುಮ್ಮನೆ ಮೂಡಿರುವುದಿಲ್ಲ, ಬದಲಾಗಿ ಅವುಗಳ ಹಿಂದೆ ನಮ್ಮವರೆಂಬ ಆತ್ಮಸಂಬಂಧದ ತುಡಿತವು ಆಳವಾಗಿ ಬೇರೂರಿರುತ್ತದೆ. ಒಂದು ಸಿದ್ಧಾಂತದ ಪ್ರಕಾರ ಗಮನಿಸುವುದಾದರೆ ಅಂತಹ ಪವಿತ್ರ ಸಂಬಂಧಗಳಿಗೆ ಪೂರ್ವ ಜನ್ಮದ ಋಣಾನುಬಂಧ ಇರುತ್ತದೆಯಂತೆ. ಹಾಗಾಗಿಯೇ ಅವು ಈಗ ನಮ್ಮೊಟ್ಟಿಗೆ ಅತಿಯಾದ ಅನ್ಯೋನ್ಯತೆ ಹೊಂದುತ್ತವೆ ಎಂದು ಹೇಳುತ್ತಾರೆ.
ನನಗೂ ಹೀಗೊಂದು ಆತ್ಮಸಂಬಂಧವು ನನ್ನ ಇಷ್ಟು ವರ್ಷದ ವೃತ್ತಿ ಬದುಕಿನಲ್ಲಿ ನನ್ನ ವಿದ್ಯಾರ್ಥಿನಿಯಲ್ಲಿ ದೊರೆತದ್ದು ನನ್ನ ಬದುಕಿನ ಘಟನಾವಳಿಗಳಲ್ಲಿ ವಿಶೇಷವಾದುದು…! ಹೌದು, ಅವಳು ಶಾಲೆಗೆ ಸೇರಿದಂದಿನಿಂದಲೇ ಅವಳಲ್ಲಿ ನನ್ನ ಬಗ್ಗೆ ಏನೋ ವಿಶೇಷ ಗೌರವ ಹಾಗೂ ಆದರದ ಭಾವನೆ ಕಾಣುತ್ತಿತ್ತು. ನನ್ನ ಮಾತನ್ನು ತಪ್ಪದೇ ಪಾಲಿಸುವುದು, ಹೇಳಿದ್ದನ್ನು ಚಾಚೂ ತಪ್ಪದೆ ನಿರ್ವಹಿಸುವುದು ಅವಳಿಗೆ ಖುಷಿ ಕೊಡುತ್ತಿತ್ತು. ಯಾವತ್ತೂ ನನ್ನ ಸಾಂಗತ್ಯದಲ್ಲೇ ಇರಬೇಕೆಂಬುದು ಅವಳ ಉತ್ಕಟ ಇಚ್ಛೆಯಾಗಿತ್ತು. ಅದ್ಯಾಕೋ ಏನೋ? ಅವಳ ಆ ವರ್ತನೆಯು ನನ್ನನ್ನೂ ಸಹ ಅವಳೊಂದಿಗೆ ಆತ್ಮೀಯವಾಗಿ ಬೆರೆಯುವಂತೆ ಮಾಡಿತ್ತು. ಏನೇ ಚಟುವಟಿಕೆ ಮಾಡಿದರೂ ಅವಳ ಉಪಸ್ಥಿತಿಯಲ್ಲಿಯೇ ಮಾಡುವುದು, ಅವಳ ನಾಯಕತ್ವದ ಗುಣವನ್ನು ಹೊರಹಾಕುವುದು ನನಗೂ ರೂಢಿಯಾಯಿತು. ಅವಳು ಬಹಳ ಚತುರೆ, ಧೈರ್ಯವಂತೆ, ನೇರ ನುಡಿ, ದಿಟ್ಟ ನಿರ್ಧಾರದ ಸ್ವಭಾವ. ಸ್ವಾರ್ಥವು ಅವಳ ಕಡೆ ಸುಳಿಯುವುದಿಲ್ಲ. ತ್ಯಾಗಕ್ಕೆ ನಿಂತರೆ ವೈರಿಗಳಿಗೂ ಸಹ ಒಳ್ಳೆಯದನ್ನೇ ಬಯಸುವ ವಿಶಾಲ ಹೃದಯದವಳು…! ಇಂತಹ ಅಪರೂಪದ ಗುಣಗಳು ಇರುವುದು ಮಹಾನ್ ವ್ಯಕ್ತಿತ್ವದ ವ್ಯಕ್ತಿಗಳಲ್ಲಿ ಮಾತ್ರ. ಹಾಗಾಗಿ ಅವಳು ಮಹಾನತೆಯ ಮೇರುಗಿರಿಯನ್ನು ಏರಲೆಂಬುದೇ ನನ್ನ ಹಾರೈಕೆ…!
ಎಲ್ಲರಲ್ಲೂ ಹಂಚಿ ತಿನ್ನುವ, ಎಲ್ಲರಿಗೂ ಒಳಿತನ್ನೇ ಬಯಸುವ, ತಪ್ಪಿದವರನ್ನು ನೇರವಾಗಿ ತಿಳಿಹೇಳಿ ತಿದ್ದುವ ಅವಳ ಸದ್ಗುಣಗಳು ನಿಜಕ್ಕೂ ಬೆರಗುಗೊಳಿಸುತ್ತವೆ. ಒಮ್ಮೆ ಮಾತಿಗೆ ಬಂದು “ನಿನ್ನಂಥ ಮಗಳು ನನಗೆ ಇರಬೇಕಿತ್ತು ನೋಡವ್ವ..!” ಎಂದು ನಾನು ಹೇಳಿದಾಗ.. “ನನ್ನನ್ನು ನಿಮ್ಮ ಮಗಳೆಂದೇ ತಿಳಿಯಿರಿ, ನಾನೂ ಸಹ ನಿಮ್ಮ ಮಗಳೆಂದು ಒಪ್ಪಿಕೊಂಡಿದ್ದೇನೆ” ಎಂದಳು…! ಅವಳ ಈ ಮಾತಿಗೆ ನನ್ನ ಕಣ್ಣುಗಳು ತುಂಬಿ ಬಂದವು. ಈ ಕಾರಣಕ್ಜಾಗಿಯೇ ಮೊದಲಿನಿಂದಲೂ ನಮ್ಮ ಈ ಮನಸುಗಳು ಒಂದಕ್ಕೊಂದು ಹೊಂದಿಕೆಯಾಗಿವೆ ಏನೋ ಅಂತ ಅನಿಸಹತ್ತಿತು. ಸಣ್ಣವಳಾದರೂ ಅವಳ ತಿಳುವಳಿಕೆಯು ದೊಡ್ಡವರನ್ನು ಮೀರಿಸುವಂತಿದೆ. ಅವಳ ಗುರುವಾದ ಕಾರಣ ನನಗೆ ಅವಳ ಮನಸು ಹಾಗೂ ಬೌದ್ಧಿಕ ಸಾಮರ್ಥ್ಯದ ಬಗ್ಗೆ ಚೆನ್ನಾಗಿ ಗೊತ್ತಿದೆ. ಯಾವ ಜನ್ಮದಲ್ಲಿ ತಾಯಿಯಾಗಿದ್ದಳೋ? ಮಗಳಾಗಿದ್ದಳೋ? ದೇವರೇ ಬಲ್ಲ. ಆದರೆ ಈ ಜನ್ಮದಲ್ಲಿ ಅವಳು ನನಗೆ ಕೊಟ್ಟ ಗೌರವ, ಕಾಳಜಿ, ನಂಬುಗೆ, ವಿಧೇಯತೆಗಳು ನನಗೆ ಬಹಳಷ್ಟು ಸಂತಸ ನೀಡಿವೆ…!
ಇದೊಂದು ಅಪರೂಪದ ಅನುಬಂಧ. ಓದಿನಲ್ಲಿ ಎಂತಹ ಕಠಿಣ ಸವಾಲು ನೀಡಿದರೂ ಎದೆಗುಂದದೆ ತಯಾರಿ ಮಾಡುವುದು ಅವಳ ಹವ್ಯಾಸ. ಎಷ್ಟೇ ಜವಾಬ್ದಾರಿ ಕೆಲಸವನ್ನು ಕೊಟ್ಟರೂ ಅಚ್ಚುಕಟ್ಟಾಗಿ ನಿಭಾಯಿಸುವ ಎದೆಗಾರಿಕೆ. ಹೀಗಾಗಿ ರಾಜ್ಯ, ರಾಷ್ಟ್ರಮಟ್ಟದ ವೇದಿಕೆಗಳಲ್ಲೂ ಸಹ ನನ್ನೊಂದಿಗೆ ಭಾಗವಹಿಸಿ, ಯಾವುದೇ ಭಯವಿಲ್ಲದೇ ಮೈಕ್ ಹಿಡಿದು ಕಾರ್ಯಕ್ರಮ ನೀಡಿದ ಧೈರ್ಯವಂತೆ ಅವಳು..!
ನಾ ಅಂದ್ರೆ ಅದ್ಯಾಕೆ ಅವಳಿಗೆ ಅಷ್ಟೊಂದು ಪ್ರಿಯವಾದೆನೋ? ಅಂತ ಕೇಳಿದರೆ ಅವಳಿಂದ ಬರುವ ಉತ್ತರ ಮಾತ್ರ “ಗೊತ್ತಿಲ್ಲ”. ಒಟ್ಟಿನಲ್ಲಿ ಜೊತೆಲೇ ಇರಬೇಕು. ನೊಂದವರಿಗೆ ಸಹಾಯ ಮಾಡಬೇಕು, ಅವಶ್ಯಕತೆ ಇರುವವರಿಗೆ ದಾಸೋಹ ಮಾಡಬೇಕು ಎಂಬ ನನ್ನ ತತ್ವಗಳನ್ನೇ ಪಾಲಿಸಬೇಕೆಂಬ ಬಯಕೆ ಅವಳದು…! ಉನ್ನತ ವಿಚಾರಗಳನ್ನು ಹೊಂದಿರುವ ಅವಳ ಭವಿಷ್ಯ ಉಜ್ವಲವಾಗಲಿ, ಅವಳು ಅಳವಡಿಸಿಕೊಂಡ ಆದರ್ಶಗಳು ಅವಳನ್ನು ಎತ್ತರದ ಸ್ಥಾನಕ್ಕೆ ಒಯ್ಯಲಿ ಎಂಬುದೇ ನನ್ನ ಪ್ರಾರ್ಥನೆ.
ಈ ಮೂಲಕ ಅವಳಿಗೆ ಹೇಳುವುದು ಬಹಳವಿದ್ದರೂ ಕೆಲವೇ ಮಾತುಗಳನ್ನು ಅವಳಿಗೆ ಹೇಳುತ್ತಿರುವೆನು….!!
ಹಲೋ ಮೈ ಡೀಯರ್ ಅವ್ವಾ..! ನೀನು ನನಗೆ ತೋರಿದ ಕಾಳಜಿ, ಪ್ರೀತಿಯನ್ನು ನಾನು ಎಂದಿಗೂ ಮರೆಯಲಾರೆ. ಹಾಗೆಯೇ ನೀನು ನನ್ನ ಬಿಟ್ಟು ತಿನಲಾರದೇ ಕೊಟ್ಟ ತಿನಿಸುಗಳು, ಪುಟ್ಟ ಪುಟ್ಟ ಕಾಣಿಕೆಗಳನ್ನು ಯಾವತ್ತೂ ಮರೆಯಲಾಗದು. ನಿನ್ನ ಈ ಕಾಳಜಿಯು ನನ್ನನ್ನು ಕಟ್ಟಿಹಾಕಿದೆ. ಮಗಳೆಂಬ ಮಮಕಾರವನ್ನು ಹುಟ್ಟು ಹಾಕಿ, ಮಗಳು ಜೀವನಕ್ಕೆ ಎಷ್ಟು ಮುಖ್ಯ ಎಂಬುದನ್ನು ನೀನು ಮನವರಿಕೆ ಮಾಡಿಸಿಬಿಟ್ಟಿದ್ದೀಯ. ಅದ್ಯಾಕೋ ಏನೋ? ನಿನ್ನ ಜೊತೆ ಮಾತಾಡದಿದ್ದರೆ, ನೋಡದಿದ್ದರೆ ಏನೋ ಕಳಕೊಂಡಂತೆ ನನಗೆ ಭಾಸವಾಗುತ್ತದೆ. ಜೀವನದಲ್ಲಿ ಬಹಳಷ್ಟು ಮುಖಗಳನ್ನು ನಾನು ನೋಡಿದ್ದೇನೆ. ಕೆಲವರು ತಮ್ಮ ಅವಶ್ಯಕತೆಗಳಿಗೆ ಮಾತ್ರ ಗೆಳೆತನ ಮಾಡುವುದನ್ನು ನೋಡಿದ್ದೇನೆ. ಆದರೆ ನಿನ್ನ ಈ ನಿಷ್ಕಪಟ ಮನಸಿನ ಭಾವನೆಗಳೇ ಬೇರೆ. ಗುರು ಪರಂಪರೆಯಲ್ಲಿ ಕೆಲವೇ ಕೆಲವು ಶಿಷ್ಯರು ಗುರುಗಳಿಗೆ ಪ್ರಿಯರಾಗಿ ಉಳಿದಿರುವುದನ್ನು ಇತಿಹಾಸದಲ್ಲಿ ನಾವು ಓದುತ್ತೇವೆ. ಹಾಗೆಯೇ ನೀನೂ ಸಹ ಈ ಬಾಂಧವ್ಯವನ್ನು ಉಳಿಸಿಕೊಂಡಿರುವೆ. ನಿನ್ನ ಪುಟ್ಟ ಮನದ ದೊಡ್ಡ ಮಾತುಗಳು, ಹಾಸ್ಯ ಪ್ರವೃತ್ತಿ, ನೇರ ನಡುವಳಿಕೆ, ಕೆಡುಕನ್ನು ವಿರೋಧಿಸುವುದು ಹಾಗೂ ಎಲ್ಲರನ್ನೂ ಗೌರವಿಸುವ ನಿನ್ನ ಗುಣಗಳು ನನಗೆ ಬಹಳ ಇಷ್ಟವಾಗುತ್ತವೆ. “ನಿಮ್ಮೊಂದಿಗೆ ಜೀವನದಲ್ಲಿ ನಾನು ಯಾವತ್ತೂ ನಿಮ್ಮ ಮಾರ್ಗದರ್ಶನದಲ್ಲಿ ಇರುತ್ತೇನೆ” ಎಂದು ಹೇಳಿದ ನಿನ್ನ ಮಾತು ನಿಜಕ್ಕೂ ನೀನು ನನ್ನ ಮೇಲೆ ಇಟ್ಟಿರುವ ಗೌರವ ಹಾಗೂ ನಂಬಿಕೆಯ ಪ್ರತಿಬಿಂಬವಾಗಿದೆ. ಜೀವನವು ದೀರ್ಘವಾಗಿಲ್ಲ. ಇರುವಷ್ಟು ದಿನ ನಾವು ಉತ್ತಮ ಕೆಲಸವನ್ನು ಮಾಡಿ ಸಾಗಬೇಕು ಅಷ್ಟೇ..! ಹಾಗಾಗಿ ನಾನೂ ಸಹ ಯಾವತ್ತೂ ನಿನ್ನ ಜೊತೆಗೆ ಇದ್ದೇನೆ. ಬಸವಾದಿ ಪ್ರಮಥರ ಮಾರ್ಗದಲ್ಲಿ ಇರುವ ನಾವು ಸಮಾಜಕ್ಕೆ ನಮ್ಮಿಂದ ಕೈಲಾದಷ್ಟು ಒಳ್ಳೆಯದನ್ನು ಮಾಡೋಣ. ಕೆಡುಕಿನಿಂದ ದೂರ ಇರೋಣ. ನಿನ್ನ ಗುರಿಯ ಕಡಗೆ ಗಮನವಿರಲಿ, ಜೊತೆಗೆ ಪ್ರಯತ್ನವೂ ಬಲವಾಗಿರಲಿ. ಮುಂದೊಂದು ದಿನ ಮಾದರಿಯಾಗಿ ಬದುಕಿ ತೋರಿಸುವಂತೆ ನೀನು ಸಾಧನೆ ಮಾಡು. ಈ ದಾರಿಯಲ್ಲಿ ಅಡೆತಡೆಗಳು ಬರುವುದು ಸಹಜ. ಕೆಲವರು ದೂರುತ್ತಾರೆ, ಹಲವರು ತೆಗಳುತ್ತಾರೆ. ಮತ್ತೆ ಕೆಲವರು ಹೊಟ್ಟೆಕಿಚ್ಚು ಪಡುತ್ತಾರೆ, ಹಲವರು ಕಾಲೆಳೆಯಲು ಹಂಬಲಿಸುತ್ತಾರೆ. ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ನಿನ್ನ ಗುರಿಯತ್ತ ನೀನು ಸಾಗಬೇಕು. ಇಂದಿನ ದಿನಮಾನಗಳು ಒಳ್ಳೆಯದಕ್ಕೆ ಪುರಸ್ಕಾರ ನೀಡುವ ಬದಲು ಕೆಟ್ಟದ್ದಕ್ಕೆ ಮಾರು ಹೋಗುತ್ತಿವೆ. ನಾವು ಇಂತಹ ವಾತಾವರಣದಲ್ಲಿ ಒಳ್ಳೆಯದನ್ನು ಹುಡುಕಲು ಹೊರಟರೆ ವಿಷದ ಬಾಟಲಿಯಲ್ಲಿ ಔಷಧಿ ಹುಡುಕಿದಂತೆ ಆಗುತ್ತದೆ. ಆಡಿಕೊಳ್ಳುವವರಾರೂ ನಮ್ಮ ಹೊಟ್ಟೆ ತುಂಬಿಸುವುದಿಲ್ಲ. ನಿಂದಕರು ಯಾವತ್ತೂ ಮುಂದೆ ಬರುವುದೂ ಇಲ್ಲ. ನಾವು ಇವುಗಳನ್ನು ಗಣನೆಗೆ ತೆಗೆದುಕೊಳ್ಳದೆ ನಮ್ಮ ನಿಜವಾದ ಗುರಿಯ ಕಡೆಗೆ ಮಾತ್ರ ನಮ್ಮ ಗಮನ ಹರಿಸಬೇಕು. ನೀನು ಸಮಾಜಕ್ಕೆ ಮಾದರಿಯಾಗಿ ಉನ್ನತ ಸ್ಥಾನಕ್ಕೆ ಏರುತ್ತೀಯೆಂಬ ನಂಬಿಕೆ ನನಗಿದೆ. ಆ ಸಂಭ್ರಮದ ಸಮಯದಲ್ಲಿ ಸಂತಸ ಪಡುವವರಲ್ಲಿ ನಾನೇ ಮೊದಲಿಗನಾಗಿದ್ದೇನೆ.
ನಿನ್ನ ಸ್ವಚ್ಛ ಮನಸಿನ ಮಾತುಗಳನ್ನು ಆಲಿಸುತ್ತಾ ನಿನ್ನೊಂದಿಗೆ ಮಾಡಿದ ಪ್ರಯಾಣಗಳು, ನಕ್ಕು ನಲಿದ ಕ್ಷಣಗಳು, ಭಾಗವಹಿಸಿದ ಅನೇಕ ಕಾರ್ಯಕ್ರಮಗಳು, ಆಲಿಸಿದ ನಿನ್ನ ಕವಿತೆಗಳು…. ಇವು ನನಗೆ ಬಹಳಷ್ಟು ಖುಷಿ ಕೊಟ್ಟಿವೆ…! ಶಿಷ್ಯಳಾಗಿ, ತಾಯಾಗಿ, ಮಗಳಾಗಿ ಈ ಜನ್ಮದಲ್ಲಿ ನನಗೆ ನೀನು ಆತ್ಮೀಯವಾಗಿ ಹಚ್ಚಿಕೊಂಡಿರುವೆ. ಇಂತಹ ಒಳ್ಳೆಯ ಮನಸಿಗೆ ಯಾವತ್ತೂ ನೋವಾಗದಿರಲಿ, ಕಂಡ ಕನಸು ನನಸಾಗಲಿ, ಯಾರ ಕೆಟ್ಟ ದೃಷ್ಟಿ ನಿನ್ನ ಮೇಲೆ ಬೀಳದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ. ನಿಜವಾಗಿಯೂ “ಮಗಳು” ಎಂಬ ವಸ್ತು ಎಷ್ಟು ಬೆಲೆಯುಳ್ಳದ್ದು? ಅದು ಎಷ್ಟೊಂದು ತ್ಯಾಗವುಳ್ಳದ್ದು? ಎನ್ನುವುದನ್ನು ನೀನು ತೋರಿಸಿಕೊಟ್ಟಿರುವೆ. ಸಂಚಿಯ ಹೊನ್ನಮ್ಮ ಹೇಳಿರುವಂತೆ “ಹೆಣ್ಣು ಹೆಣ್ಣೆಂದೇತಕೆ ಬೀಳು ಗಳೆಯುವರು, ಕಣ್ಣು ಕಾಣದ ಗಾವಿಲರು? ಹೆಣ್ಣಲ್ಲವೇ ನಮ್ಮನೆಲ್ಲ ಹಡೆದವಳು?”ಎಂದು ಕೇಳುತ್ತಾ ಮಗಳ ಮಹತ್ವದ ಬಗ್ಗೆ ಹೊನ್ನಮ್ಮ ಅರಿವು ಮೂಡಿಸಿದ್ದಾಳೆ….!
ಕೊನೆಗೆ ಒಂದು ಮಾತು,-“ಭಾವ ಶುದ್ಧವಿದ್ದರೆ ಭಾಗ್ಯಕ್ಕೆ ಕೊರತೆ ಇಲ್ಲವೇ ಇಲ್ಲ” ಎಂಬಂತೆ ನಿನಗೆ ಒಳಿತೇ ಆಗುತ್ತದೆ. ಈ ನಮ್ಮ ಅನುಬಂಧವು ಯಾವತ್ತೂ ಗಟ್ಟಿಯಾಗಿರಲಿ, ನಿನ್ನ ಮನೋಭಿಲಾಷೆಗಳು ಈಡೇರಲಿ. “ಎಲ್ಲಿಯೂ ನಿಲ್ಲದಿರು, ಮನೆಯನೆಂದೂ ಕಟ್ಟದಿರು, ಕೊನೆಯನೆಂದೂ ಮುಟ್ಟದಿರು, ಓ… ಅನಂತವಾಗಿರು…! ನೂರು ಮತದ ಹೊಟ್ಟ ತೂರಿ, ಎಲ್ಲ ತತ್ವದೆಲ್ಲೆ ಮೀರಿ, ನಿರ್ದಿಗಿಂತವಾಗಿ ಏರಿ, ಓ ನನ್ನ ಚೇತನಾ ಆಗು ನೀ ಅನಿಕೇತನ…!” ಎಂಬ ಕುವೆಂಪುರವರ ವಿಶ್ವಮಾನವ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡು, “ಸಕಲ ಜೀವಾತ್ಮರಿಗೆ ಲೇಸನೇ ಬಯಸಿದ” ಬಸವಾದಿ ಶರಣರು ಹಾಗೂ ಮಹಾನ್ ದಾರ್ಶನಿಕರ ಆದರ್ಶಗಳನ್ನು ಅಳವಡಿಸಿಕೊಂಡು, ಜಾತಿ, ಕುಲಗಳೆಂಬ ಕಲ್ಪಿತಗಳನ್ನು ಮೀರಿ, ವಿಶ್ವಮಾನವಳಾಗಿ ಬೆಳೆಯುವಂತಾಗಲಿ. ಉತ್ತಮ ಬದುಕು ನಿನ್ನದಾಗಲಿ ಎಂದು ಹಾರೈಸುತ್ತ ಮತ್ತೇ ಮಾತಾಡುವೆ….!! ಬೈ ಬೈ…! ಶುಭವಾಗಲಿ.
ಶ್ರೀ. ಆಯ್.ಎಮ್. ಮುಲ್ಲಾ ಸರ್..! ಶಿಕ್ಷಕರು, @KHPS ಚಿಕ್ಕಬೆಳ್ಳಿಕಟ್ಟಿ. ಮಾಜಿ ಅಧ್ಯಕ್ಷರು, ಕ.ಸಾ.ಪ ಬೈಲಹೊಂಗಲ ತಾಲೂಕು

