ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯಿಂದ ನಾಳೆ ಗದುಗಿನಲ್ಲಿ ಬೃಹತ್ ಉದ್ಯೋಗ ಮೇಳ : ಶರಣಬಸಪ್ಪ ಗುಡಿಮನಿ

MK HasiruKranti
ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯಿಂದ ನಾಳೆ ಗದುಗಿನಲ್ಲಿ ಬೃಹತ್ ಉದ್ಯೋಗ ಮೇಳ : ಶರಣಬಸಪ್ಪ ಗುಡಿಮನಿ
WhatsApp Group Join Now
Telegram Group Join Now
ಗದಗ, ಎ. ೯ : ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ, ಕನೆಕ್ಟ್ ಸಂಸ್ಥೆ, ಧಾರವಾಡ ಹಾಗೂ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಎ. ೧೧ ರಂದು ಶನಿವಾರ ಮುಂಜಾನೆ ೮ ಗಂಟೆಗೆ ನಗರದ ಭೂಮರಡ್ಡಿ ಸರ್ಕಲ್ ಬಳಿ ಇರುವ ಬಸವೇಶ್ವರ ಕಲಾ ಮತ್ತು ವಾಣಿಜ್ಯ  ಮಹಾವಿದ್ಯಾಲಯದಲ್ಲಿ ಆವರಣದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಹೇಳಿದರು.
ಗುರುವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು ಸುಮಾರು ೪ ಸಾವಿರಕ್ಕೂ ಹೆಚ್ಚಿನ ಅಭ್ಯರ್ಥಿಗಳು ಈ ಬೃಹತ್ ಉದ್ಯೋಗ ಮೇಳದಲ್ಲಿ ಪಾಲ್ಗೋಳ್ಳುವ ನಿರೀಕ್ಷೆಯನ್ನು ಹೊಂದಲಾಗಿದ್ದು ಇದುವರೆಗೂ ಸುಮಾರು ೮ ನೂರಕ್ಕೂ ಹೆಚ್ಚು ಅಭ್ಯರ್ಥಿಗಳು ಆನ್‌ಲೈನ್‌ದಲ್ಲಿ ಉದ್ಯೋಗಕ್ಕಾಗಿ ತಮ್ಮ ಹೆಸರುಗಳನ್ನು ನೋಂದಣಿ ಮಾಡಿಕೊಂಡಿದ್ದು ಇವರಲ್ಲಿ ೪ ನೂರರಷ್ಟು ಮಹಿಳಾ ಅಭ್ಯರ್ಥಿಗಳಿದ್ದಾರೆ ವಿಕಲಚೇತನರಿಗೂ ಹಾಗೂ ಅವಿದ್ಯಾವಂತರಿಗೂ ಉದ್ಯೋಗ ಅವಕಾಶ ಕಲ್ಪಿಸುವ ಉದ್ದೇಶವನ್ನು ಹೊಂದಲಾಗಿದೆ.
ಎ. ೧೧ ರಂದು ಬೃಹತ್ ಉದ್ಯೋಗ ಮೇಳ ಬೆಳಿಗ್ಗೆಯಿಂದ ಸಂಜೆಯವರೆಗೂ ನಿರಂತರವಾಗಿ ನಡೆಯಲಿದ್ದು ಸುಮಾರು ೫೦ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡು ಸ್ಥಳದಲ್ಲಿಯೇ ಸಾಂಕೇತಕವಾಗಿ ನೇಮಕಾತಿ ಪತ್ರ ನೀಡುವರು ಉಳಿದವರಿಗೆ ನಿಗದಿತ ದಿನಾಂಕ ನೀಡಿ ನೇಮಕಾತಿ ಆದೇಶ ನೀಡುವರು. ಆನ್‌ಲೈನ್ ನೋಂದಣಿ ಮಾಡಿಕೊಂಡವರನ್ನು ಹೊರತುಪಡಿಸಿ ಉಳಿದವರು ಅಂದೇ ಸ್ಥಳದಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಬೃಹತ್ ಉದ್ಯೋಗ ಮೇಳದ ಉದ್ಘಾಟನಾ ಸಮಾರಂಭವು ಮುಂಜಾನೆ ೧೧ ಗಂಟೆಗೆ ಜರುಗಲಿದ್ದು ಸಮಾರಂಭದ ಸಾನಿಧ್ಯವನ್ನು ಗದಗ ತೋಂಟದಾರ್ಯ ಮಠದ ಪೂಜ್ಯ ಜ.ಡಾ.ಸಿದ್ಧರಾಮ ಮಹಾಸ್ವಾಮಿಗಳು ವಹಿಸುವರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಉದ್ಘಾಟನೆ ನೆರವೇರಿಸುವರು.
ಮುಖ್ಯ ಅತಿಥಿಗಳಾಗಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನರಗುಂದ ಶಾಸಕ ಸಿ.ಸಿ. ಪಾಟೀಲ,  ಕರ್ನಾಟಕ ಖನಿಜ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ರೋಣ ಶಾಸಕರೂ ಆದ ಜಿ.ಎಸ್.ಪಾಟೀಲ,  ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಕರ್ನಾಟಕ ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರೂ ಹಾಗೂ ಮಾಜಿ ಶಾಸಕರಾದ ಡಿ.ಆರ್.ಪಾಟೀಲ, ಜ.ತೋಂಟದಾರ್ಯ ವಿದ್ಯಾಪೀಠದ ಆಡಳಿತಾಧಿಕಾರಿ ಶಿವಾನಂದ ಪಟ್ಟಣಶೆಟ್ಟಿ ಅವರುಗಳು ಆಗಮಿಸುವರು.
ಅಧ್ಯಕ್ಷತೆಯನ್ನು ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ವಹಿಸುವರು. ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಮಾಜಿ ಅಧ್ಯಕ್ಷ ಎಸ್.ಪಿ.ಸಂಶಿಮಠ, ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷರಾದ ತೋಂಟೇಶ ಕೆ. ಕುರಡಗಿ, ಹುಬ್ಬಳ್ಳಿ ಮೂರಶಿಳ್ಳಿ ಫೌಂಡೇಶನ್ ಪ್ರಜ್ಞಾಪೂರ್ವಕ ವಾಗ್ಮಿಯಾದ ಸಿ.ಎ.ನಟರಾಜ ಮೂರಶಿಳ್ಳಿ, ಧಾರವಾಡ ಕನೆಕ್ಟ್ ಸಂಸ್ಥೆಯ ವ್ಯವಸ್ಥಾಪಕ ಗಿರೀಶ ಅಂಗಡಿ, ಗದಗ ದತ್ತಾಗ್ರೂಪ್ಸ್ ವ್ಯವಸ್ಥಾಪಕ ಕಿರಣ ಪ್ರಕಾಶ ಭೂಮಾ, ಗದಗ ಬಸವೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಎಂ.ಎಂ. ಬುರಡಿ ಆಗಮಿಸುತ್ತಾರೆ ಎಂದು ಗುಡಿಮನಿ ವಿವರಿಸಿದರು.
ಧಾರವಾಡ ಕನೆಕ್ಟ್ ಸಂಸ್ಥೆಯ ವ್ಯವಸ್ಥಾಪಕ ಗಿರೀಶ ಅಂಗಡಿ ಅವರು ಮಾತನಾಡಿ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯು ವ್ಯಾಪಾರಸ್ಥರ ಮತ್ತು ಕೈಗಾರಿಕೋದ್ಯಮಿಗಳ ಹಿತ ಕಾಪಾಡುವದರೊಂದಿಗೆ ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವಾಡುತ್ತಿರುವ ಹಿನ್ನೆಲೆಯಲ್ಲಿ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯು ಒಂದು ಹೆಜ್ಜೆ ಮುಂದೆ ಇಟ್ಟು ಉದ್ಯೋಗ ಮೇಳವನ್ನು ಆಯೋಜನೆ ಮಾಡುವುದರೊಂದಿಗೆ ನಿರುದ್ಯೋಗಿ ಯುವಕ, ಯುವತಿಯರಿಗೆ ಉದ್ಯೋಗ ದೊರಕಬೇಕು ಮತ್ತು ಉದ್ಯೋಗಿಗಳಾಗಿ ಜೀವನ ನಡೆಸಬೇಕು, ಸ್ವಾವಲಂಭಿಗಳಾಗಬೇಕು ಎಂಬ ಉದ್ದೇಶದೊಂದಿಗೆ ವಾಣಿಜ್ಯೋದ್ಯಮ ಸಂಸ್ಥೆಯ  ಸಹಕಾರದೊಂದಿಗೆ ಈ ಬೃಹತ್ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳುತ್ತಿದೆ ಎಂದರು.
ಅಭ್ಯರ್ಥಿಗಳಿಗೆ ಒಂದೇ ಸ್ಥಳದಲ್ಲಿ ಅನೇಕ ಕಂಪನಿಗಳ ಬಗ್ಗೆ ಮಾಹಿತಿ ದೊರೆಯುತ್ತದೆ. ಇದರಿಂದ ಸಮಯ ಮತ್ತು ವೆಚ್ಚ ಉಳಿತಾಯವಾಗುತ್ತದೆ. ಅಭ್ಯರ್ಥಿಗಳು ತಮ್ಮ ಅರ್ಹತೆ ಮತ್ತು ಕೌಶ್ಯಲಗಳಿಗೆ ತಕ್ಕ ಉದ್ಯೋಗವನ್ನು ಸುಲಭವಾಗಿ ಹುಡುಕಬಹುದು. ಉದ್ಯೋಗ ಮೇಳಗಳಲ್ಲಿ ನೇರ ಸಂದರ್ಶನಗಳ ಅವಕಾಶ ಇರುತ್ತದೆ. ಇದರಿಂದ ಅಭ್ಯರ್ಥಿಗಳು ತಕ್ಷಣವೇ ತಮ್ಮ  ವಿದ್ಯಾರ್ಹತೆ ಸಾಮರ್ಥ್ಯವನ್ನು ತೋರಿಸಲು ಸಾಧ್ಯವಾಗುತ್ತದೆ. ಅದೇ ದಿನ ಉದ್ಯೋಗ ಸಿಗಬಹುದು, ನಾಲ್ಕನೆಯದಾಗಿ ಇಂತಹ ಉದ್ಯೋಗ ಮೇಳವು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ ಮತ್ತು ಉದ್ಯೋಗ ಕ್ಷೇತ್ರದ ಬಗ್ಗೆ ಸ್ಪಷ್ಟ ಅರಿವು ನೀಡುತ್ತದೆ ಎಂದರು. *
ಕಂಪನಿಗಳಿಗೆ ಪ್ರತಿಭೆಯನ್ನು ಕಡಿಮೆ ಸಮಯದಲ್ಲಿ ಆಯ್ಕೆ ಮಾಡಬಹುದು ಇದರಿಂದ ನೇಮಕಾತಿ ಪ್ರಕ್ರಿಯೆ ಸುಗಮವಾಗುತ್ತದೆ. ಒಟ್ಟಾರೆ, ಉದ್ಯೋಗ ಮೇಳವು ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯು ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ನಿರುದ್ಯೋಗಿಗಳು ಇಂತಹ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಅವರು ಹೇಳಿದರು.
ಚೇಂಬರ್ ಗೌರವ ಕಾರ್ಯದರ್ಶಿ ಚನ್ನವೀರಪ್ಪ ಹುಣಸಿಕಟ್ಟಿ ಸ್ವಾಗತಿಸಿದರು ಉಪಾಧ್ಯಕ್ಷ ಜಯದೇವ ಮೆಣಸಗಿ ವಂದಿಸಿದರು. ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಶಿದ್ರಾಮಪ್ಪ ಉಮಚಗಿ, ಪ್ರಕಾಶ ಉಗಲಾಟದ, ಸಹ ಗೌರವ ಕಾರ್ಯದರ್ಶಿ ರಾಘವೇಂದ್ರ ಕಾಲವಾಡ, ಅಶೋಕ ಸಂಕಣ್ಣವರ, ಕೋಶಾಧ್ಯಕ್ಷ ಅರವಿಂದ ಕಾಮತ, ಕನೆಕ್ಟ್ ಸಂಸ್ಥೆಯ ಸಾಧಿಕ್, ಪ್ರಾ.ಎಂ.ಎಂ.ಬುರಡಿ ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article