ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯಲ್ಲಿ ನುಡಿನಮನ ಹಾಗೂ ಅಮವಾಸ್ಯೆ ಅನುಭಾವ ಗೋಷ್ಠಿ, ಪ್ರತಿಭಾ ಪುರಸ್ಕಾರ
ಬೆಳಗಾವಿ ೧೮: ಮಾಜಿ ಸಚಿವರು, ನಾಡಿನ ಹಿರಿಯ ರಾಜಕಾರಣಿಗಳು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಗೌರವಾಧ್ಯಕ್ಷರಾದ ಶರಣ ಭೀಮಣ್ಣ ಖಂಡ್ರೆಯವರ ನಿಧನದಿಂದ ಸಮಾಜ ಬಡವಾಗಿದೆ ಎಂದು ಅವರ ಕೊಡುಗೆ ಸಮಾಜಕ್ಕೆ ಅನನ್ಯವಾದುದು ಎಂದು ಕಾರಂಜಿಮಠದ ಪೂಜ್ಯ ಗುರುಸಿದ್ಧ ಮಹಾಸ್ವಾಮೀಜಿಯವರು ಹೇಳಿದರು. ಅವರು ಶಿವಬಸವ ನಗರದ ಲಿಂಗಾಯತ ಭವನದಲ್ಲಿಆಯೋಜಿಸಿದ್ದ ಭೀಮಣ್ಣ ಖಂಡ್ರೆಯವರ ಶ್ರದ್ಧಾಂಜಲಿ ನುಡಿನಮನ ಹಾಗೂ ಮಾಸಿಕ ಅನುಭಾವ ಗೋಷ್ಠಿಯ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಬದುಕಿನುದ್ದಕ್ಕೂ ಶರಣ ಚಿಂತನೆಗಳಂತೆ ಬಾಳಿದ ಧೀಮಂತ ನಾಯಕ ಭೀಮಣ್ಣ ಖಂಡ್ರೆಯವರಾಗಿದ್ದರು. ಮಹಾಸಭೆಯ ಅಧ್ಯಕ್ಷರಾಗಿ ಸಮಾಜವನ್ನು ತಳಮಟ್ಟದಲ್ಲಿ ಕಟ್ಟಿ ಬೆಳೆಸಿದರು. ಮಹಾಸಭೆಗೆ ಅವರ ಕೊಡುಗೆ ಅನನ್ಯ ಹಾಗೂ ಚಿರಸ್ಮರಣೀಯವೆನಿಸಿದೆ. ಮಹಾತ್ಮಗಾಂಧಿಯವರ ನಾಯಕತ್ವದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಭೀಮಣ್ಣ ಖಂಡ್ರೆಯವರು ಬಳಿಕ ಕರ್ನಾಟಕ ಏಕೀಕರಣ ಚಳವಳಿಯಲ್ಲೂ ಮುಂಚೂಣಿಯಲ್ಲಿ ಗುರುತಿಸಿಕೊಂಡು ಏಕೀಕರಣಕ್ಕಾಗಿ ಹೋರಾಡಿದ ಕನ್ನಡ ಸೇನಾನಿ. ಸಮಾಜದ ವಿರುದ್ಧ ಯಾರೇ ಮಾತನಾಡಿದರೂ ಅದನ್ನು ತೀವ್ರವಾಗಿ ಖಂಡಿಸುತ್ತಿದ್ದ ಅವರು ಹಾವನೂರ ವರದಿಯನ್ನು ಸ್ಪಷ್ಟವಾಗಿ ಪ್ರಶ್ನಿಸಿದ್ದರು. ಸಮಾಜಕ್ಕೆ ಅನ್ಯಾಯವಾದಾಗ ತೀವ್ರವಾಗಿ ಪ್ರತಿಭಟಿಸುವ ಛಾತಿ ಅವರದಾಗಿತ್ತು. ಸಮಾಜ ಇಬ್ಬಾಗುವುದನ್ನು ಸಾಕಷ್ಟು ವಿರೋಧಿಸಿದ್ದ ಭೀಮಣ್ಣ ಖಂಡ್ರೆಯವರು ಕೊನೆ ಉಸಿರಿನ ವರೆಗೆ ಸಮಾಜದ ಕುರಿತು ಚಿಂತಿಸಿದರು ಎಂದರು.

ಬೆಳಗಾವಿ ಜಿಲ್ಲಾ ಘಟಕ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಅಧ್ಯಕ್ಷೀಯ ನುಡಿಗಳನ್ನಾಡಿ, ಮಾಜಸೇವೆ, ಸರಳತೆ ಮತ್ತು ಶರಣ ಮೌಲ್ಯಗಳ ಪ್ರತೀಕವಾಗಿದ್ದ ಭೀಮಣ್ಣ ಖಂಡ್ರೆ ಅವರು ಲಿಂಗೈಕ್ಯರಾಗಿರುವ ಸುದ್ದಿ ವೀರಶೈವ ಲಿಂಗಾಯತ ಸಮಾಜ ಹಾಗೂ ನಾಡಿನ ಅಪಾರ ಅಭಿಮಾನಿಗಳಿಗೆ ತೀವ್ರ ದುಃಖವನ್ನುಂಟುಮಾಡಿದೆ.ತಮ್ಮ ಜೀವನವನ್ನು ಗುರು ಲಿಂಗ ಜಂಗಮ ಸೇವೆಗೆ ಅರ್ಪಿಸಿದ್ದ ಅವರು, ಜನರ ಹೃದಯಗಳಲ್ಲಿ ಅಚ್ಚಳಿಯದ ಸ್ಥಾನವನ್ನು ಗಳಿಸಿದ್ದರು. ಬಸವಾದಿ ಶಿವಶರಣರ ತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಂಡಿದ್ದ ಭೀಮಣ್ಣ ಖಂಡ್ರೆ ಅವರು, ಲಿಂಗಾಯತ ಸಮಾಜದ ಶಕ್ತಿಯಾಗಿದ್ದರು, ಗಟ್ಟಿ ಧ್ವನಿಯಾಗಿದ್ದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯನ್ನು ವ್ಯಕ್ತಿ ಆಧಾರಿತ ಸಂಸ್ಥೆಯಿಂದ ಸಾಂಸ್ಥಿಕ ನೆಲಗಟ್ಟಿನ ಮೇಲೆ ಬಲಿಷ್ಠ ಸಂಘಟನೆಯಾಗಿ ರೂಪಿಸಿದ್ದುದು ಅವರ ಬಹುದೊಡ್ಡ ಕೊಡುಗೆ. ಅವರು ಉಸಿರಿರುವ ವರೆಗೂ ಸಮಾಜಕ್ಕಾಗಿ ಚಿಂತಿಸಿದರು. ಅವರ ನಿಸ್ವಾರ್ಥ ಸೇವಾಭಾವ ಇಂದಿನ ಸಮಾಜದ ಯುವಕರಿಗೆ ಪ್ರೇರಣೆಯಾಗಿ ನಿಂತಿದೆ. ಅವರು ನಮ್ಮ ಮಧ್ಯೆ ದೇಹಾತೀತರಾಗಿದ್ದರೂ, ಅವರ ಮೌಲ್ಯಗಳು, ಆದರ್ಶಗಳು ಮತ್ತು ಸಮಾಜಕ್ಕಾಗಿ ಮಾಡಿದ ಸತ್ಕಾರ್ಯಗಳು ಸದಾ ಜೀವಂತವಾಗಿರಲಿವೆ ಎಂದರು.

ಸಾಹಿತಿ ಜಲತ್ಕುಮಾರ ಭೀಮರಾವ್ ಪುಣಜಗೌಡ ಅವರು ಶರಣರು ಚಿಂತನೆಗೈದ ಜೀವನ ಮೌಲ್ಯಗಳ ವಿಷಯ ಕುರಿತು ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ವಿಭಾಗದಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು.
ಡಾ.ಎಚ್.ಬಿ.ರಾಜಶೇಖರ, ಡಾ.ಗುರುದೇವಿ ಹುಲೆಪ್ಪನವರಮಠ, ಜ್ಯೋತಿ ಬದಾಮಿ, ಚಂದ್ರಶೇಖರ ಬೆಂಬಳಗಿ, ಆರ್.ಪಿ.ಪಾಟೀಲಿ, ಪ್ರಸಾದ ಹಿರೇಮಠ, ಶಂಕರ ಪಟ್ಟೇದ, ವೀರಭದ್ರ ಅಂಗಡಿ ಮೊದಲಾದವರು ಉಪಸ್ಥಿತರಿದ್ದರು. ಮಂಗಲ ಕಾಕತಿಕರ ವಚನ ಪ್ರಾರ್ಥನೆ ಮಾಡಿದರು. ಸೋಮಲಿಂಗ ಮಾವಿನಕಟ್ಟಿ ಸ್ವಾಗತಿಸಿದರು. ಶಾರದಾ ಪ್ರಸಾದ ಹಿರೇಮಠ ವಚನ ವಿಶ್ಲೇಷಣೆ ಮಾಡಿದರು. ಶೈಲಾ ಸಂಸುದ್ದಿ ಅತಿಥಿಗಳನ್ನು ಪರಿಚಯಿಸಿದರು. ಶ್ವೇತಾ ಹೆದ್ದೂರ ಶೆಟ್ಟಿ ನಿರೂಪಿಸಿದರು. ವ್ಹಿ.ಕೆ.ಪಾಟೀಲ ವಂದಿಸಿದರು.


