ಬಳ್ಳಾರಿ ಮೇ ೨೨.ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವೀರಶೈವ ವಿದ್ಯಾವರ್ಧಕ ಸಂಘದ ವೀರಶೈವ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಶಾಂತನಗೌಡ ಧಾರವಾಡ ಉಚ್ಚ ನ್ಯಾಯಾಲಯ ಆದೇಶದ ಮೇರೆಗೆ ಮರು ನೇಮಕಗೊಂಡಿದ್ದಾರೆ. ಅವರು ಕಾಲೇಜಿನ ಆಡಳಿತ ಮಂಡಳಿಯ ಕಚೇರಿಯಲ್ಲಿ ಇತ್ತೀಚೆಗೆ ಅಧಿಕಾರವನ್ನು ಸ್ವೀಕರಿಸಿದರು.
ಕಳೆದ ಕೆಲ ದಿನಗಳ ಹಿಂದೆ ವೀರಶೈವ ವಿದ್ಯಾವರ್ಧಕ ಸಂಘವು ಶಾಂತನಗೌಡ ಅವರನ್ನು ವೀರಶೈವ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ ಆ ಸ್ಥಾನಕ್ಕೆ ಸಾಹುಕಾರ್ ಸತೀಶ್ ಬಾಬು ಅವರನ್ನು ನೇಮಕಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಶಾಂತನಗೌಡ ಧಾರವಾಡ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದುಕೊಂಡು ಮತ್ತೆ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಅಧಿಕಾರವನ್ನು ಸ್ವೀಕರಿಸಿದ್ದಾರೆ.
ಈ ಸಂದರ್ಭದಲ್ಲಿ ಅವರ ಸ್ನೇಹಿತರು ಮತ್ತು ಅಭಿಮಾನಿಗಳು ಹಾಗೂ ವಿವಿ ಸಂಘದ ಅಜೀವ ಸದಸ್ಯರುಗಳು ಶಾಂತನಗೌಡ ಅವರನ್ನು ಅಭಿನಂದಿಸಿದ್ದಾರೆ.