ಬಳ್ಳಾರಿ ಜೂನ್ 23 : ಜೀವನದಲ್ಲಿ ಕೆಲವರು ಕ್ಷುಲ್ಲಕ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಮಾಡುತ್ತಾರೆ ಇಂತಹ ದುರ್ಬಲ ಮನಸ್ಥಿತಿ ಉಳ್ಳವರಿಗೆ ಆತ್ಮಸ್ಥೈರ್ಯ ತುಂಬುವಂತ ಸೆಪ್ಟೆಂಬರ್ 10 ಎಂಬ ಆತ್ಮಹತ್ಯೆ ವಿರೋಧಿ ಸಂದೇಶವುಳ್ಳ ಚಲನಚಿತ್ರವನ್ನು ನಿರ್ಮಿಸಿರುತ್ತೇವೆ , ಈ ಚಿತ್ರ ಸಮಾಜಕ್ಕೆ ಒಂದು ಆತ್ಮಹತ್ಯಾ ವಿರೋಧಿ ಉತ್ತಮ ಸಂದೇಶವನ್ನು ಸಾರುವ ಚಿತ್ರವಾಗಲಿದೆ ಮಾನಸಿಕ ತೊಳಲಾಟದಲ್ಲಿರುವ ಪ್ರತಿಯೊಬ್ಬರು ಈ ಚಲನಚಿತ್ರವನ್ನು ತಪ್ಪದೇ ವೀಕ್ಷಿಸಬೇಕೆಂದು ಚಿತ್ರ ನಿರ್ದೇಶಕರಾದ ಓಂ ಸಾಯಿ ಪ್ರಕಾಶ್ ತಿಳಿಸಿದರು.
ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಜೀವನದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಸಹ ಧೈರ್ಯಬೇಕು ಅದೇ ಧೈರ್ಯವನ್ನು ಬಳಸಿಕೊಂಡು ನಾವು ಬದುಕನ್ನು ರೂಪಿಸಿಕೊಳ್ಳಲು ಏಕೆ ಸಾಧ್ಯವಿಲ್ಲ ಎಂಬಂತಹ ಸಾರಾಂಶವುಳ್ಳ ಈ ಚಿತ್ರ ಜೀವನದಲ್ಲಿ ನಿರಾಶೆಗೊಳಪಟ್ಟ ಎಲ್ಲರಿಗೂ ಒಂದು ರೀತಿಯಲ್ಲಿ ಕೌನ್ಸಲಿಂಗ್ ತರ ಕೆಲಸ ಮಾಡಿ ಆಶಾವಾದವನ್ನು ಕಲ್ಪಿಸುವಂತಹ ಚಿತ್ರ ಇದಾಗಲಿದೆ, ಈ ಚಿತ್ರವನ್ನು ಜುಲೈ ಮೊದಲ ವಾರದಲ್ಲಿ ಬಿಡುಗಡೆಗೊಳಿಸಲಾಗುವುದು ನಗರದ ಚಿತ್ರ ಪ್ರೇಮಿಗಳು ಈ ಚಿತ್ರವನ್ನು ವೀಕ್ಷಿಸಿ ಯಶಸ್ವಿಗೆ ಕಾರಣರಾಗಬೇಕೆಂದು ಮನವಿ ಮಾಡಿದರು.
ಚಿತ್ರದ ಪೋಷಕ ನಟ ಗಣೇಶ್ ರಾವ್ ಮಾತನಾಡಿ, ಸಾಯಿ ಪ್ರಕಾಶ್ ರವರು ಇಲ್ಲಿಯವರೆಗೆ ಸುಮಾರು 105 ಚಲನಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ ಅದರಲ್ಲಿ 90 ಚಿತ್ರಗಳು ಶತದಿನೋತ್ಸವವನ್ನು ಆಚರಿಸುವೆ, ಇಂತಹ ಸಕ್ಸಸ್ ಹೊಂದಿರುವ ನಿರ್ದೇಶಕನ ಜೊತೆ ಕೆಲಸ ಮಾಡೋದು ನನಗೆ ಅತ್ಯಂತ ಹೆಮ್ಮೆಯ ಸಂಗತಿ, ಅಷ್ಟೇ ಅಲ್ಲದೆ ಸಾಯಿಪ್ರಕಾಶ್ ತಮ್ಮ ಜೀವನದಲ್ಲಿ 125 ಬಾರಿ ರಕ್ತದಾನವನ್ನು ಮಾಡಿ ಹಲವಾರು ಜೀವಗಳಿಗೆ ನೆರವಾಗಿದ್ದಾರೆ, ತಮ್ಮ ವೃತ್ತಿ ಜೀವನದಲ್ಲಿ ಕೆಲವೊಂದು ಸಲ ಒಂದು ದಿನಕ್ಕೆ ಮೂರು ಶಿಫ್ಟ್ ನಲ್ಲಿ ಕೆಲಸ ಮಾಡಿ ತಮ್ಮ ವೃತ್ತಿಪರತೆಯನ್ನು ಮೆರೆದಿದ್ದರೂ ಇಂದಿಗೂ ಸಹ ಅದೇ ಲವಲವಿಕೆಯಿಂದ ಈ ಚಿತ್ರವನ್ನು ನಿರ್ಮಿಸಿ ನಿರ್ಮಾಣ ಮಾಡಿದ್ದಾರೆ ಈ ಚಿತ್ರ ಯಶಸ್ವಿಯಾಗಲಿ ಎಂದು ಅವರು ಆಶಿಸಿದರು.
ಚಿತ್ರಕ್ಕೆ ಜಿಜಿ ಕೃಷ್ಣ ಛಾಯಾಗ್ರಹಣ ನಾಗೇಂದ್ರ ಪ್ರಸಾದ್ ಸಂಗೀತ ಮತ್ತು ಸಾಹಿತ್ಯ ಇದೆ. ಈ ಸಂದರ್ಭದಲ್ಲಿ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ನಟರಾಜ ಕಾಂಪ್ಲೆಕ್ಸ್ ಚಿತ್ರಮಂದಿರಗಳ ವ್ಯವಸ್ಥಾಪಕರಾದ ಲಕ್ಷ್ಮಿಕಾಂತ್ ರೆಡ್ಡಿ, ಚಿತ್ರನಟ ಬಳ್ಳಾರಿ ಮಂಜ ಮತ್ತು ಚಿತ್ರದ ನಾಯಕ ಜಯಸಿಂಹ ಹಾಗೂ ಮಹಾನಗರ ಪಾಲಿಕೆ ಮೇಯರ್ ಮುಲ್ಲಂಗಿ ನಂದೀಶ್ ಮಾತನಾಡಿದರು.


