ಬೆಳಗಾವಿ: (ಡಿ.13) ಗ್ರಾಮೀಣ ಭಾಗದಲ್ಲಿ ಗರ್ಭದಿಂದ ಗೋರಿಯವರಿಗೆ ಸೇವೆ ಸಲ್ಲಿಸುವ ಆರೋಗ್ಯ ಸುರಕ್ಷಾ ಅಧಿಕಾರಿಗಳಿಗೆ ಜನರ ಪ್ರೀತಿಯೇ ಸುರಕ್ಷೆ ಎಂದು ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಮಂಜುಳಾ ಎನ್.ಎಸ್. ಹೇಳಿದರು.
ಬೆಳಗಾವಿಯಲ್ಲಿ ಅವರು ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದವರು ಆಯೋಜಿಸಿದ್ದ ಕಿರಿಯ ಆರೋಗ್ಯ ಸಹಾಯಕಿ ಲಿಂಗೈಕ್ಯ ಶ್ರೀಮತಿ.ಸಾವಿತ್ರಿ ಬಾಬುರಾವ್ ಶಿವಪೂಜಿ ದತ್ತಿ ನಿಧಿ ಮತ್ತು ದಾದಿಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಿದ್ದರು.
ಹತ್ತು ಹಲವು ಸೌಲಭ್ಯಗಳ ಕೊರತೆಯೊಂದಿಗೆ ಗ್ರಾಮೀಣರ ಆರೋಗ್ಯದ ಕಾಳಜಿಯ ಜೊತೆಗೆ ತಮ್ಮ ಸೇವೆಯುದ್ಧಕ್ಕೂ ಸಾವಿರಾರು ಹೆರಿಗೆ ಮಾಡಿಸುವ ಮತ್ತು ಗರ್ಭಿಣಿಯ, ಬಾಣಂತಿಯ, ನವಜಾತ ಶಿಶುವಿನ ಆರೈಕೆಯಿಂದ ಹಿಡಿದು ಕೊನೆಯವರೆಗೆ ಸೇವೆ ಸಲ್ಲಿಸುವ ಆರೋಗ್ಯ ಸುರಕ್ಷಾಧಿಕಾರಿಗಳ ಅಂದರೆ ದಾದಿಯರ ಸೇವೆ ಅದ್ವಿತೀಯವಾಗಿದೆ, ಸ್ವಂತ ಕುಟುಂಬದ ಕಾಳಜಿಗಿಂತಲೂ ಹೆಚ್ಚಿನ ಸೇವೆಯನ್ನು ಸಮಾಜದ ಅದರಲ್ಲೂ ಗ್ರಾಮೀಣ ಬಡ ಜನರಿಗೆ ನೀಡುವ ಆರೋಗ್ಯ ಸುರಕ್ಷಾಧಿಕಾರಿಯವರ ಸೇವೆಯನ್ನು ಗುರುತಿಸಿ ಅವರನ್ನು ಗೌರವಿಸುವ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ ಎಂದರು.
ಲೇಖಕಿಯರ ಸಂಘದ ಅಧ್ಯಕ್ಷೆ ಶ್ರೀಮತಿ ಸುಮಾ ಕಿತ್ತೂರು ಮಾತನಾಡಿ ಗ್ರಾಮೀಣ ಭಾಗದಲ್ಲಿ ದಾದಿಯರ ಕೈಯಲ್ಲಿ ಹೆರಿಗೆ ಮಾಡಿಸಿಕೊಂಡ ಯಾರಿಗೂ ತೊಂದರೆ ಯಾದದ್ದು ಇಂದಿನವರೆಗೆ ಕಂಡುಬಂದಿಲ್ಲ, ಇಂದು ಅದೆಲ್ಲ ಮರೆಯಾಗುತ್ತಾ ಬಂದಿದೆ, ಇಂದೆನಿದ್ದರೂ ಪ್ಯಾಕೇಜ್ ಹೆರಿಗೆ, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಪ್ಯಾಕೇಜ್ ಹೆರಿಗೆ ಆದರೂ ನಮ್ಮ ಮಕ್ಕಳು ಸುರಕ್ಷಿತವಾಗಿ ಮನೆ ಮುಟ್ಟುತ್ತಾರೆಂಬ ಗ್ಯಾರಂಟಿ ಇಲ್ಲದಂತಾಗಿದ್ದು ದುರ್ದೈವ ಎಂದರು.
ನಿವೃತ್ತ ಆರೋಗ್ಯ ಇಲಾಖೆ ಅಧಿಕಾರಿ ಎಸ್ ಜಿ ಸಿದ್ನಾಳ ಮಾತನಾಡಿ ಹಿಂದಿನಿಂದ ಇಂದಿನವರೆಗೂ ಅತ್ಯುತ್ತಮ ಸೇವೆ ಗ್ರಾಮೀಣ ಭಾಗದಲ್ಲಿ ಆರೋಗ್ಯ ಇಲಾಖೆಯಿಂದ ಆಗುತ್ತಿದೆ ಆದರೂ ಇಂದು ಖಾಸಗಿ ಆಸ್ಪತ್ರೆಗಳಿಗೆ ತೆರಳುವವರು ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.
ಕಿರಿಯ ಆರೋಗ್ಯ ಸಹಾಯಕಿಯರಾಗಿ ಸೇವೆ ಸಲ್ಲಿಸಿದ ಶ್ರೀಮತಿ ಕಲಾವತಿ ಕಾದ್ರೋಳಿ, ಶ್ರೀಮತಿ. ಸುಲೋಚನಾ ಕುಲಕರ್ಣಿ, ಶ್ರೀಮತಿ.ಅನುಸೂಯಾ ಬೆಣ್ಣಿ, ಶ್ರೀಮತಿ.ಮಂಗಳಾ ನಾವಿ, ಶ್ರೀಮತಿ. ಸುಮಿತ್ರಾ ಬಿರಾದರ್ ಪಾಟೀಲ ಮತ್ತು ಶ್ರೀಮತಿ. ಶಮೀಮ ಭಾಗವಾನ ಅವರುಗಳನ್ನು ಸತ್ಕರಿಸಲಾಯಿತು. ಆರು ಜನರನ್ನು ಸತ್ಕರಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀಮತಿ ಸಂಗೀತಾ ಶ್ರೀ. ಮುರುಗೇಶ ಶಿವಪೂಜಿ ಗ್ರಾಮೀಣ ಭಾಗದಲ್ಲಿ ತಮ್ಮ ತಾಯಿಯೊಂದಿಗಿನ ಅನುಭವ ಹಂಚಿಕೊಂಡರು. ಸನ್ಮಾನಿತರ ಪರವಾಗಿ ಕಲಾವತಿ ಕಾದ್ರೊಳ್ಳಿ ಮಾತನಾಡಿದರು. ಜಾಗತಿಕ ಲಿಂಗಾಯಿತ ಮಹಾಸಭೆಯ ಜಿಲ್ಲಾಧ್ಯಕ್ಷ ಬಸವರಾಜ್ ರೊಟ್ಟಿ ಮತ್ತು ವೀರಶೈವ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷೆ ಶ್ರೀಮತಿ.ರತ್ನಪ್ರಭಾ ಬೆಲ್ಲದ, ಹಿರಿಯ ಸಾಹಿತಿ ಶ್ರೀಮತಿ. ನೀಲಗಂಗಾ ಚರಂತಿಮಠ ಸಿರಿ ಹಲವು ಗಣ್ಯರು ಉಪಸ್ಥಿತರಿದ್ದರು. ಲೇಖಕೀಯರ ಸಂಘದ ಉಪಾಧ್ಯಕ್ಷೆ ಶ್ರೀಮತಿ. ವಾಸಂತಿ ಮೇಳೆದ ಸ್ವಾಗತಿಸಿದರು, ಕಾರ್ಯದರ್ಶಿ ಶ್ರೀಮತಿ.ಆಶಾ ಯಮಕನಮರಡಿ ಕಾರ್ಯಕ್ರಮ ನಿರ್ವಹಿಸಿದರು, ಖಜಾಂಚಿ ಶ್ರೀಮತಿ. ಅನ್ನಪೂರ್ಣ ಹಿರೇಮಠ ವಂದಿಸಿದರು.


