ಮೇ 20 ರಂದು ನಡೆಯಲಿರುವ ಸಾಧನಾ ಸಮಾವೇಶದ ಪೂರ್ವಭಾವಿ ಸಭೆ
ಸಂಭ್ರಮಾಚರಣೆ ಯಶಸ್ಸಿಗೆ ಸಚಿವರ ಮನವಿ
*ಹರಿಹರ (ದಾವಣಗೆರೆ):* ಅಭಿವೃದ್ಧಿ ಹರಿಕಾರ ಸಿದ್ದರಾಮಯ್ಯ ಹಾಗೂ ಸಂಘಟನಾ ಚತುರ ಡಿ.ಕೆ.ಶಿವಕುಮಾರ್ ಸಾರಥ್ಯದ ರಾಜ್ಯ ಸರ್ಕಾರ ಚುನಾವಣೆ ಪೂರ್ವ ನೀಡಿದ್ದ ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆಯುತ್ತಿದೆ. ಇದೀಗ ಸ್ವಾಭಿಮಾನದಿಂದ ಎರಡನೇ ವರ್ಷದ ಸಂಭ್ರಮಾಚರಣೆ ಮಾಡಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ರಾಜ್ಯ ಸರ್ಕಾರ ಎರಡು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಮೇ 20 ರಂದು ಹೊಸಪೇಟೆಯಲ್ಲಿ ನಡೆಯಲಿರುವ 2ನೇ ವರ್ಷದ ಸಾಧನೆ ಸಮಾವೇಶ ಹಾಗೂ 1 ಲಕ್ಷ ಹಕ್ಕುಪತ್ರ ವಿತರಣೆ ಜೊತೆಗೆ ವಿವಿಧ ಸವಲತ್ತು ವಿತರಣಾ ಕಾರ್ಯಕ್ರಮ ಕುರಿತಂತೆ ಹರಿಹರ ಹರಪನಹಳ್ಳಿ ಸರ್ಕಲ್ ನ ಕ್ರೀಡಾ ಕ್ಲಬ್ ನಲ್ಲಿ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಸಚಿವರು, ಪ್ರಗತಿಯತ್ತ ಕರ್ನಾಟಕ ಹೆಸರಿನಲ್ಲಿ ನಡೆಯುತ್ತಿರುವ ಸಮಾವೇಶದ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕೊಟ್ಟ ಮಾತನ್ನು ಉಳಿಸಿಕೊಂಡ ನಮ್ಮದು ಸ್ವಾಭಿಮಾನಿ ಸರಕಾರವಾಗಿದೆ. 2028ರ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುವುದು ಗ್ಯಾರಂಟಿ, ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ನಮ್ಮ ಸರ್ಕಾರ ವಾರ್ಷಿಕ 52 ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ಪ್ರತಿ ಮನೆ ಮನೆಗೂ ನಮ್ಮ ಗ್ಯಾರಂಟಿ ಯೋಜನೆಗಳು ತಲುಪಿವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಸರ್ಕಾರದ ಸಾಧನೆಯನ್ನು ಜನರ ಮುಂದೆ ಇಡುವ ಕೆಲಸವನ್ನು ಮಾಡಲಾಗುತ್ತಿದೆ. ಜೊತೆಗೆ, ತಲೆಮಾರುಗಳಿಂದಲೂ ನೆಲೆಯಿಲ್ಲದ ಹಾಗೂ ನಾಗರಿಕ ಮೂಲಸೌಕರ್ಯಗಳಿಂದ ವಂಚಿತರಾದ ಹಾಡಿ, ಹಟ್ಟಿ, ದೊಡ್ಡಿ, ತಾಂಡಾ ಹಾಗೂ ಕಾಲೋನಿಗಳ ಜನರಿಗೆ ಅವರು ವಾಸಿಸುತ್ತಿರುವ ಜಾಗದ ಮೇಲೆ ಹಕ್ಕು ನೀಡುವ ಮಹತ್ವದ ಉದ್ದೇಶದಿಂದ ಒಂದು ಲಕ್ಷ ಕುಟುಂಬಗಳಿಗೆ ಆಸ್ತಿ ಹಕ್ಕುಪತ್ರ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಸ್ವಾತಂತ್ರ ಬಂದಾಗ ದೇಶದ ಪರಿಸ್ಥಿತಿ ಹೇಗಿತ್ತು. ಈಗ ಹೇಗಿದೆ. ಬ್ರಿಟಿಷರು ನಮಗೆ ಏನೂ ಬಿಟ್ಟುಹೋಗಿರಲ್ಲಿಲ್ಲ. ಶೂನ್ಯದಿಂದ ನಮ್ಮ ಭಾರತ ಇಂದು ಅಭಿವೃದ್ಧಿಯತ್ತ ಸಾಗುತ್ತಿದೆ. ಇದಕ್ಕೆ ಕಾಂಗ್ರೆಸ್ ಪಕ್ಷ ಹಾಕಿಕೊಟ್ಟ ಭದ್ರ ಬುನಾದಿಯೇ ಕಾರಣ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗೆಲ್ಲಾ ಸುಭದ್ರ ಸರ್ಕಾರವನ್ನು ಕೊಟ್ಟಿದ್ದೀವಿ, ಅಭದ್ರತೆ ಇದ್ದಾಗ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ನಾವು ಅಧಿಕಾರಕ್ಕೆ ಬಂದಾಗಲೆಲ್ಲಾ ಜನ ಸಾಮಾನ್ಯರಿಗೆ ತಲುಪುವ ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಇದು ಬಡವರ ಬಗ್ಗೆ ಕಾಂಗ್ರೆಸ್ ಪಕ್ಷಕ್ಕಿರುವ ಬದ್ಧತೆ ಎಂದು ಸಚಿವರು ಹೇಳಿದರು.
* *ಯಾವ ಪುರುಷಾರ್ಥಕ್ಕೆ ಬಿಜೆಪಿ ಜನಾಕ್ರೋಶ*
ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆ ಮಾಡುತ್ತಿರುವ ಬಿಜೆಪಿಯವರಿಗೆ ಯಾವುದೇ ನೈತಿಕ ಹಕ್ಕಿಲ್ಲ. ನಾವು ಕಳೆದ ಎರಡು ವರ್ಷದಲ್ಲಿ, ಮತ್ತು ಅದಕ್ಕೂ ಮೊದಲು ಸಿದ್ದರಾಮಯ್ಯನವರ ಸರ್ಕಾರವಿದ್ದಾಗ ಸಾಕಷ್ಟು ಜನಪರ ಅಭಿವೃದ್ಧಿ ಕೆಲಸಗಳನ್ನು ಮಾಡಿ ತೋರಿಸಿದ್ದೇವೆ, ಬಿಜೆಪಿಯವರಿಗೆ ಹೇಳಿಕೊಳ್ಳಲು ಒಂದೇ ಒಂದು ಸಾಧನೆ ಇಲ್ಲ ಎಂದು ಸಚಿವರು ಕಿಡಿ ಕಾರಿದರು.
* *ಕಾರ್ಯಕ್ರಮದ ಯಶಸ್ಸಿಗೆ ಮನವಿ*
ಈ ಬೃಹತ್ ಸ್ವಾಭಿಮಾನಿ ಹಾಗೂ ಸಂಭ್ರಮಾಚರಣೆ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕು. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಹಕ್ಕುಪತ್ರ ವಿತರಣೆ ಹಾಗೂ ವಿವಿಧ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಗುತ್ತಿದೆ. ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಾರಥ್ಯದಲ್ಲಿ ನಡೆಯುತ್ತಿರುವ ಈ ಸಮಾವೇಶದಲ್ಲಿ ಪಕ್ಷದ ರಾಷ್ಟ್ರೀಯ ನಾಯಕರು ಪಾಲ್ಗೊಳ್ಳಲಿದ್ದು, ಎಲ್ಲರೂ ಸಮಾರಂಭದ ಯಶಸ್ಸಿಗೆ ಸಹಕರಿಸಬೇಕು ಎಂದು ಸಚಿವರು ಮನವಿ ಮಾಡಿದರು.
ಸಭೆಯಲ್ಲಿ ಮಾಜಿ ಶಾಸಕರಾದ ಎಸ್.ರಾಮಪ್ಪ, ಉಸ್ತುವಾರಿ ಕಾರ್ಯದರ್ಶಿ ಎಸ್.ವಿಜಯಕುಮಾರ, ನಂದಿಗಾವಿ ಶ್ರೀನಿವಾಸ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಅನಿತಾಬಾಯಿ, ಬ್ಲಾಕ್ ಅಧ್ಯಕ್ಷರಾದ ಎಲ್.ಬಿ.ಹನಮಂತಪ್ಪ, ಅಬೀದ್ ಅಲಿ, ಕೆಪಿಸಿಸಿ ಕಾರ್ಯದರ್ಶಿ ರೇವಣಸಿದ್ದಪ್ಪ, ನಿಖಿಲ್ ಕೊಂಡಜ್ಜಿ, ಇಮ್ತಿಯಾಜ್ ಜಲಾಲ, ಬಸವರಾಜ ಬೆಳ್ಳೊಡಿ, ಮುರಗೇಶಪ್ಪ, ತಾಹಿರ್, ಶ್ರೀಕಾಂತ ಟಿ, ಗೌಸಫಿರ್, ಶ್ರೀಕಾಂತ ಟಿ, ಸುನಿಲ್ ಎಚ್, ಕೆ.ಉಮರ್ ಬಾಷಾ, ಹಾಲೇಶ್ ಗೌಡ ಮುಂತಾದವರು ಉಪಸ್ಥಿತರಿದ್ದರು.