ಕಾರವಾರ: ಉತ್ತರ ಕನ್ನಡ ಜಿಲ್ಲೆಯಅಂಕೋಲಾ- ಶಿರೂರು ಗುಡ್ಡಕುಸಿತ ಪ್ರಕರಣದಲ್ಲಿ ಹೆದ್ದಾರಿಯ ಮೇಲೆ ಬಿದ್ದಿರುವ ಮಣ್ಣು ತೆಗೆಯುವ ಕಾರ್ಯಾಚರಣೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ದುರಂತದಲ್ಲಿ ನಾಪತ್ತೆಯಾದ 10 ಜನರಲ್ಲಿ ನಿನ್ನೆಯವರೆಗೆ 6 ಮಂದಿಯ ಶವ ಪತ್ತೆಯಾಗಿದೆ. ಇನ್ನೂ ನಾಲ್ವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಈ ನಡುವೆ ನಿನ್ನೆ ಸಂಜೆ ವೇಳೆಗೆ ಅಂಕೋಲಾ ತಾಲೂಕಿನ ಬೆಳಂಬಾರ ಕಡಲತೀರದಲ್ಲಿ ಛಿದ್ರಗೊಂಡಿದ್ದ ದೇಹವೊಂದು ಪತ್ತೆಯಾಗಿದ್ದು, ಅದು ಇಲ್ಲಿಂದ ಕೊಚ್ಚಿಕೊಂಡು ಹೋದ ವ್ಯಕ್ತಿಯ ಶವವಿರಬಹುದು ಎಂದು ಶಂಕಿಸಲಾಗಿದೆ. ಇನ್ನೂ ಗುರುತು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಜಿಲ್ಲಾಡಳಿತದ ಮಾಹಿತಿಯಂತೆ ಇಲ್ಲಿ 10 ಮಂದಿ ಕಣ್ಮರೆಯಾಗಿದ್ದಾರೆ; ಇವರಲ್ಲಿ 6 ಮಂದಿಯ ಶವಗಳು ಸಿಕ್ಕಿವೆ ಹಾಗೂ ಇನ್ನೂ ನಾಲ್ವರಿಗಾಗಿ ಶೋಧ ನಡೆಯುತ್ತಿದೆ.
ಕರಾವಳಿ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಣ್ಣು ತೆರವು ಕಾರ್ಯಕ್ಕೆ ಅಡ್ಡಿಯಾಗಿದೆ. ಧಾರಾಕಾರ ಮಳೆಯ ನಡುವೆಯೂ ಮಣ್ಣು ತೆರವು ಭರದಿಂದ ಸಾಗಿದ್ದು, ಐಆರ್‌ಬಿ ಸಿಬ್ಬಂದಿ ತೆರವು ಮಾಡುತ್ತಿದ್ದಾರೆ. ಎನ್‌ಡಿಆರ್‌ಎಫ್, ಪೊಲೀಸ್ ತಂಡಗಳು ಶೋಧ ಕಾರ್ಯ ಮುನ್ನಡೆಸಿವೆ. ಮಳೆಯಿಂದಾಗಿ ಗುಡ್ಡದಿಂದ ಝರಿಯಂತೆ ನೀರು ಹರಿದುಬರುತ್ತಿದ್ದು, ಮತ್ತೆ ಗುಡ್ಡ ಕುಸಿತ ಭೀತಿ ತಲೆದೋರಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕಾರ್ಯಾಚರಣೆ ಪ್ರದೇಶದಲ್ಲಿ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ.