ಬೆಂಗಳೂರು, ಮಾರ್ಚ್ 24: ಸ್ಮಾರ್ಟ್ ಮೀಟರ್ ಟೆಂಡರ್ನಲ್ಲಿ ಹಗರಣ ನಡೆದಿದೆ ಎಂಬ ಊಹಾಪೋಹಗಳು ಕೇಳಿಬರುತ್ತಿದೆ. ನಿನ್ನೆಯಷ್ಟೇ ವಿದ್ಯುತ್ ಬಿಲ್ ದರ ಏರಿಕೆ ಮಾಡಿದ್ದ ಕಾಂಗ್ರೆಸ್ ಸರ್ಕಾರ ವಿದ್ಯುತ್ ಸ್ಮಾರ್ಟ್ ಮೀಟರ್ ಹೆಸರಿನಲ್ಲಿ 15,500 ಕೋಟಿ ರೂ ಹಗರಣ ನಡೆಸುವ ಮೂಲಕ ಜನರ ಹಣ ಲೂಟಿ ಮಾಡಿರುವುದು ಬಯಲಾಗಿದೆ ಎಂದು ಬಿಜೆಪಿ ಕೂಡ ಆರೋಪ ಮಾಡಿದೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಕೆಪಿಟಿಸಿಎಲ್ ಎಂ.ಡಿ ಪಂಕಜ್ ಕುಮಾರ್ ಪಾಂಡೆ ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೆಪಿಟಿಸಿಎಲ್ ಎಂ.ಡಿ ಪಂಕಜ್ ಕುಮಾರ್ ಪಾಂಡೆ, ಹಂತ ಹಂತವಾಗಿ ಸ್ಮಾರ್ಟ್ ಮೀಟರ್ ಮಾಡಿ ಅಂತ ಕೆಇಆರ್ಸಿ ಹೇಳಿದೆ. ಬೇರೆ ಬೇರೆ ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಇದೆ. ಕೇಂದ್ರ ಸರ್ಕಾರ ಸೂಚನೆ ಸಹ ಇದೆ. ಹೊಸ ಕನೆಕ್ಷನ್ ತೆಗೆದುಕೊಳ್ಳುವಾಗ ಸ್ಮಾರ್ಟ್ ಮೀಟರ್ ಅಳವಡಿಕೆ ಮಾಡಲಾಗಿದೆ. ಸ್ಮಾರ್ಟ್ ಮೀಟರ್ ಮನೆಗಳಿಗೆ ಹಾಕಿದರೆ, ಮೀಟರ್ ಲೀಡರ್ ಮನೆಗೆ ಹೋಗುವ ಅವಶ್ಯಕತೆ ಇರೋದಿಲ್ಲ, ಹಾಗಾಗಿ ಎಲ್ಲರ ಮನೆಗೂ ಸ್ಮಾರ್ಟ್ ಮೀಟರ್ ಹಾಕಿಸಿ. ಅದರಲ್ಲೂ ಹೊಸ ಮನೆಗಳಲ್ಲಿ ಎಲ್ಲರೂ ಕೂಡ ಈ ಸ್ಮಾರ್ಟ್ ಮೀಟರ್ ಕಡ್ಡಾಯ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಿದೆ. ಮಾರ್ಚ್ನಲ್ಲಿ ವಿದ್ಯುತ್ ಬೇಡಿಕೆ 18,395 ಮೆಗಾವ್ಯಾಟ್ ಇದೆ. ಕಳೆದ ವರ್ಷಕ್ಕಿಂತ 15 ರಷ್ಟು ವಿದ್ಯುತ್ ಬೇಡಿಕೆ ಹೆಚ್ಚಿದೆ. ಕಳೆದ ನವಂಬರ್ನಲ್ಲಿ 14,856 ಮೆಗಾವ್ಯಾಟ್ ಇತ್ತು. ಏಪ್ರಿಲ್, ಮೇನಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಿರುತ್ತೆ. ವಿದ್ಯುತ್ ಸಂಗ್ರಹ ರಾಜ್ಯದಲ್ಲಿ ಚೆನ್ನಾಗಿದೆ. ರಾಜ್ಯದಲ್ಲಿ ವಿದ್ಯುತ್ ಬೇಡಿಕೆ 17,220 ಮೆಗಾವ್ಯಾಟ್ ಇತ್ತು. ಈ ವರ್ಷ 18,500 MW ವರೆಗೆ ವಿದ್ಯುತ್ ಬೇಡಿಕೆ ಹೆಚ್ಚಾಗಲಿದೆ. ಕೈಗಾರಿಕಾ ವಲಯದಲ್ಲಿ ಶೇ 15 ರಷ್ಟು ವಿದ್ಯುತ್ ಬೇಡಿಕೆ ಹೆಚ್ಚಿದೆ ಎಂದು ತಿಳಿಸಿದರು.
ಉತ್ತರ ಪ್ರದೇಶ, ಪಂಜಾಬ್ ಎರಡು ರಾಜ್ಯಗಳಿಂದ ಮೇ ವರೆಗೆ ವಿದ್ಯುತ್ ಖರೀದಿ ಮಾಡಲಾಗುತ್ತೆ. ಉತ್ತರ ಪ್ರದೇಶದಿಂದ 1400, ಪಂಜಾಬ್ನಿಂದ 200-300 mW ವಿದ್ಯುತ್ ಖರೀದಿ ಮಾಡಲಾಗುತ್ತಿದ್ದು, ಜೂನ್ ನಂತರ ರಾಜ್ಯದಿಂದ ಪಂಜಾಬ್, ಯುಪಿಗೆ ವಿದ್ಯುತ್ ಸರಬರಾಜು ಮಾಡುತ್ತೇವೆ. ರೈತರಿಗೆ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ವಿದ್ಯುತ್ ಸರಬರಾಜು ಮಾಡಲಾಗುತ್ತೆ. ವಿದ್ಯುತ್ ಕೊರತೆ ಆಗದಂತೆ ಕ್ರಮ ಕೈಗೊಂಡಿದ್ದೇವೆ. ಯಾವುದೇ ಸಮಸ್ಯೆ ಆಗದಂತೆ ವಿದ್ಯುತ್ ನೀಡಲಾಗುತ್ತೆ ಎಂದು ಸ್ಪಷ್ಟನೆ ನೀಡಿದ್ದಾರೆ.