ಕುರುಗೋಡ, ಸೆ. 2, 2024:* ವಿದ್ಯುತ್ ಸಮಸ್ಯೆಯಾದಾಗ ರೈತರು ತಾಳ್ಮೆ ವಹಿಸಿದರೆ ವಿದ್ಯುತ್ ಸಂಬಂಧಿತ ಅವಘಡಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದು ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಹೇಳಿದ್ದಾರೆ.
ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಜೆಸ್ಕಾಂ) ಕುರುಗೋಡು ಉಪವಿಭಾಗದಲ್ಲಿ ಹಮ್ಮಿಕೊಂಡಿರುವ ವಿದ್ಯುತ್ ಸುರಕ್ಷತಾ ಕಾರ್ಯಾಗಾರದ ವೇಳೆ ಪಟ್ಟಣದ ದೊಡ್ಡಬಸವೇಶ್ವರ ದೇವಸ್ಥಾನದ ಬಳಿ ಬೀದಿ ನಾಟಕ ಪ್ರದರ್ಶನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಹಾಗೂ ಸಾರ್ವಜನಿಕರು ಯಾವುದೇ ರೀತಿ ವಿದ್ಯುತ್ ಸಂಬಂಧಿ ಸಮಸ್ಯೆಗಳು ಬಂದರೂ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಬೇಕು. ಇಂತಹ ಸಂದರ್ಭದಲ್ಲಿ ಅವಸರದ ನಿರ್ಧಾರ ತೆಗೆದುಕೊಂಡು ವಿದ್ಯುತ್ ಅವಘಡ ಸಂಭವಿಸಿದರೆ ನಿಮ್ಮನ್ನೇ ನಂಬಿದ್ದ ನಿಮ್ಮ ಕುಟುಂಬ ಸಮಸ್ಯೆ ಎದುರಿಸಬೇಕಾಗಬಹುದು ಎಂದು ಹೇಳಿದರು.
ವಿದ್ಯುತ್ ಸಂಬಂಧಿ ಸಮಸ್ಯೆಗಳ ಪರಿಹಾರಕ್ಕಾಗಿ ಜೆಸ್ಕಾಂ ವತಿಯಿಂದ ದಿನದ 24 ಗಂಟೆ ಕಾರ್ಯನಿರ್ವಹಿಸುವ ಸಹಾಯವಾಣಿ ಸೇರಿದಂತೆ ವಾಟ್ಸಾಪ್ ಮತ್ತಿತರೆ ತುರ್ತು ಸಂಪರ್ಕ ಸಂಖ್ಯೆಗಳನ್ನು ನೀಡಲಾಗಿದೆ. ಹೀಗಾಗಿ ಯಾವುದೇ ತೊಂದರೆಗಳಿದ್ದರೂ ಅವುಗಳ ಮೂಲಕ ಜೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರೆ ಅವರು ಸಮಸ್ಯೆ ಬಗೆಹರಿಸುತ್ತಾರೆ. ಇದರ ಅನುಕೂಲ ಪಡೆದು ನೀವು ಸುರಕ್ಷಿತವಾಗಿರುವುದರ ಜತೆಗೆ ನಿಮ್ಮ ಸುತ್ತ ಇರುವವರನ್ನೂ ಸುರಕ್ಷಿತವಾಗಿರಿಸಬೇಕು ಎಂದು ಹೇಳಿದರು.
ವಿದ್ಯುತ್ ಸರಕ್ಷತಾ ಕ್ರಮಗಳ ಕುರಿತು ಜೆಸ್ಕಾಂ ಸಿಬ್ಬಂದಿ ನಾಟಕ ಪ್ರದರ್ಶನದ ಮೂಲಕ ಮಾಹಿತಿ ನೀಡಿದರು. ಜತೆಗೆ ವಿದ್ಯುತ್ ಸುರಕ್ಷತಾ ಮುಂಜಾಗೃತ ಕ್ರಮಗಳ ಸೂಚನಾ ಫಲಕಗಳ ಪ್ರದರ್ಶಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.