ನವದೆಹಲಿ,11: ಸೌದಿ ಅರೇಬಿಯಾದ ರಾಜ ಮುಹಮ್ಮದ್ ಬಿನ್ ಸಲ್ಮಾನ್ ಅವರ ಬಹುನಿರೀಕ್ಷಿತ ಪಾಕಿಸ್ತಾನ ಪ್ರವಾಸ ದಿಢೀರ್ ಮುಂದೂಡಿಕೆಯಾಗಿದೆ. ಆದರೆ ಮುಂದಿನ ದಿನಾಂಕಗಳ ಬಗ್ಗೆ ಯಾವುದೇ ಅಧಿಕೃತ ಘೋಷಣೆಯೂ ಆಗಿಲ್ಲ. ಸಲ್ಮಾನ್ ಅವರ ಪಾಕ್ ಭೇಟಿ ದಿಢೀರ್ ರದ್ದುಗೊಳ್ಳುವುದಕ್ಕೆ ಸೌದಿ ಅರೇಬಿಯಾ ನಿಖರ ಕಾರಣವನ್ನೂ ತಿಳಿಸಿಲ್ಲ. ಎಲ್ಲವೂ ಅಂದುಕೊಂಡಂತೆಯೇ ನಡೆದಿದ್ದರೆ ಮೇ.19 ರಿಂದ 2 ದಿನಗಳ ಕಾಲ ಪಾಕ್ ಗೆ ಸಲ್ಮಾನ್ ಭೇಟಿ ನೀಡಬೇಕಿತ್ತು.
ಸೌದಿ ಅರೇಬಿಯಾದ ವಿದೇಶಾಂಗ ಇಲಾಖೆ ವಕ್ತಾರ ಮುಮ್ತಾಜ್ ಝೆಹ್ರಾ ಬಲೂಚ್ ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಮುಂದಿನ ದಿನಾಂಕ ನಿಗದಿ ಬಗ್ಗೆ ಇಸ್ಲಾಮಾಬಾದ್-ರಿಯಾದ್ ನಡುವೆ ಮಾತುಕತೆ ನಡೆಯುತ್ತಿದ್ದು ಶೀಘ್ರವೇ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
ಮಾರ್ಚ್‌ನಲ್ಲಿ ಪ್ರಧಾನಿ ಶೆಹಬಾಜ್ ಷರೀಫ್ ಸೌದಿಗೆ ಭೇಟಿ ನೀಡಿದ್ದ ನಂತರ ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ನಡುವಿನ ಇತ್ತೀಚಿನ ರಾಜತಾಂತ್ರಿಕ ಮತ್ತು ವ್ಯಾಪಾರಕ್ಕೆ ಸಂಬಂಧಿತ ಉನ್ನತ ಮಟ್ಟದ ಭೇಟಿ ನಡೆಯುವ ಸಾಧ್ಯತೆಯಿದೆ.
ಪಾಕಿಸ್ತಾನ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದು, ನೆರವಿನ ನಿರೀಕ್ಷೆಯ ದೃಷ್ಟಿಯಿಂದ ಸೌದಿ ರಾಜ ಮುಹಮ್ಮದ್ ಬಿನ್ ಸಲ್ಮಾನ್ ಪಾಕ್ ಭೇಟಿ ಮಹತ್ವ ಪಡೆದುಕೊಂಡಿತ್ತು.
ಮುಂಬರುವ ದಿನಗಳಲ್ಲಿ ಪಾಕಿಸ್ತಾನದಲ್ಲಿ USD 5 ಶತಕೋಟಿ ಮೌಲ್ಯದ ಸೌದಿ ಹೂಡಿಕೆಗಳನ್ನು ಆಕರ್ಷಿಸಲು ಮಕ್ಕಾದಲ್ಲಿ ಎರಡೂ ದೇಶಗಳ ನಡುವಿನ ಒಪ್ಪಂದವನ್ನು ಈ ಭೇಟಿ ಕಾರ್ಯರೂಪಕ್ಕೆ ತರುವ ನಿರೀಕ್ಷೆ ಇತ್ತು.
ಈ ಹಿಂದೆ 2019 ರ ಫೆಬ್ರವರಿಯಲ್ಲಿ ಮೊಹಮ್ಮದ್ ಬಿನ್ ಸಲ್ಮಾನ್ ಪಾಕ್ ಗೆ ಭೇಟಿ ನೀಡಿದ್ದರು. 2022 ರಲ್ಲಿಯೂ ಪಾಕ್ ಭೇಟಿ ನಿಗದಿಯಾಗಿತ್ತಾದರೂ ಕೊನೆ ಕ್ಷಣದಲ್ಲಿ ರದ್ದುಗೊಂಡಿತ್ತು.