ಸತೀಶ ಶುಗರ್ ಫಿನಾಲೆ ಸ್ಪರ್ಧೆ  ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕೆ ಉತ್ತಮ ವೇದಿಕೆ  – ಗಜಾನನ ಮಂಗಸೂಳಿ  

Hasiru Kranti
ಸತೀಶ ಶುಗರ್ ಫಿನಾಲೆ ಸ್ಪರ್ಧೆ  ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕೆ ಉತ್ತಮ ವೇದಿಕೆ  – ಗಜಾನನ ಮಂಗಸೂಳಿ  
WhatsApp Group Join Now
Telegram Group Join Now
ಅಥಣಿ :  ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ  ಅಥಣಿ, ರಾಯಬಾಗ,  ಕಾಗವಾಡ ಹಾಗೂ ನಿಪ್ಪಾಣಿ, ಚಿಕ್ಕೋಡಿ ತಾಲೂಕುಗಳ ವಿದ್ಯಾರ್ಥಿಗಳಲ್ಲಿರುವ ಅಡಗಿದ ಪ್ರತಿಭೆಯನ್ನು ಹೊರತರುವ ಉದ್ದೇಶದಿಂದ  ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ  ಸತೀಶ್ ಶುಗರ್ ಅವಾರ್ಡ್  ಗ್ರ್ಯಾಂಡ್ ಫಿನಾಲೆ  ಸ್ಪರ್ಧೆಯನ್ನು ಇದೇ  27ರಂದು ಬೆಳಿಗ್ಗೆ 11 ಗಂಟೆಯಿಂದ ಚಿಕ್ಕೋಡಿಯ ಕಿವಡ ಮೈದಾನದಲ್ಲಿ ಆಯೋಜಿಸಲಾಗಿದ್ದು, ಅಥಣಿ ತಾಲೂಕಿನ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಗಜಾನನ ಮಂಗಸೂಳಿ ಹೇಳಿದರು.
 ಅವರು  ಬುಧವಾರ ಪಟ್ಟಣದಲ್ಲಿ  ಸತೀಶ್ ಶುಗರ್ ಅವಾರ್ಡ್ ಗ್ರ್ಯಾಂಡ್ ಫಿನಾಲೆ ಸ್ಪರ್ಧೆಯ ಕರಪತ್ರಗಳನ್ನ ಬಿಡುಗಡೆಗೊಳಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಅಡಗಿರುವ ಸೂಕ್ತ ಪ್ರತಿಭೆಗಳನ್ನು ಗುರುತಿಸಲು  ಈ ಸತೀಶ್ ಅವಾರ್ಡ್ ಪಿನಾಲೆ ಸ್ಪರ್ಧೆಯು ಉತ್ತಮ ವೇದಿಕೆಯಾಗಿದ್ದು, ಸಚಿವರಾದ   ಸತೀಶ ಜಾರಕಿಹೊಳಿ ಅವರು  ತಮ್ಮ ರಾಜಕೀಯ ಜೀವನದಲ್ಲಿ  ಜನಪರ ಕಾರ್ಯಗಳ ಜೊತೆಗೆ  ವಿದ್ಯಾರ್ಥಿಗಳಿಗಾಗಿ ಈ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ನಮ್ಮ ತಾಲೂಕಿನ ವಿದ್ಯಾರ್ಥಿಗಳು ಕೂಡ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದ ಅವರು  ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ (ಕಲಾ, ವಾಣಿಜ್ಯ ಮತ್ತು ವಿಜ್ಞಾನ) ವಿಭಾಗಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಹಾಗೂ ಪಿಯುಸಿ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಪ್ರಾಚಾರ್ಯರಿಂದ ದೃಢೀಕರಿಸಲ್ಪಟ್ಟ ಅಂಕಪಟ್ಟಿ ಅಥವಾ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ.ಭಾಷಣ ಸ್ಪರ್ಧೆಯಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್ ಹಾಗೂ ಮರಾಠಿ ಭಾಷೆಗಳಲ್ಲಿ ಮಾತನಾಡಲು ಅವಕಾಶವಿದ್ದು, ಕನಿಷ್ಠ 5 ಮತ್ತು ಗರಿಷ್ಠ 10 ನಿಮಿಷಗಳ ಕಾಲಾವಕಾಶ ನಿಗದಿಪಡಿಸಲಾಗಿದೆ. ರಾಜಕೀಯ, ಧಾರ್ಮಿಕ ಹಾಗೂ ವಿವಾದಾತ್ಮಕ ವಿಷಯಗಳಿಗೆ ಅವಕಾಶ ಇರುವುದಿಲ್ಲ.
ಗಾಯನ ಸ್ಪರ್ಧೆಯಲ್ಲಿ ಯಾವುದೇ ಭಾಷೆಯ ಚಲನಚಿತ್ರ ಗೀತೆಗಳಿಗೆ ಅವಕಾಶವಿದ್ದರೆ, ಜಾನಪದ ಗಾಯನ ಸ್ಪರ್ಧೆಯಲ್ಲಿ ಚಲನಚಿತ್ರ ಗೀತೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ಕನ್ನಡ, ಹಿಂದಿ ಹಾಗೂ ಮರಾಠಿ ಜಾನಪದ ಗೀತೆಗಳಿಗೆ ಗರಿಷ್ಠ 6 ನಿಮಿಷಗಳ ಅವಧಿ ನಿಗದಿಯಾಗಿದೆ. ಜಾನಪದ ನೃತ್ಯ ಹಾಗೂ ಸಮೂಹ ನೃತ್ಯ ಸ್ಪರ್ಧೆಗಳನ್ನೂ ಆಯೋಜಿಸಲಾಗಿದ್ದು, ಪ್ರತಿ ತಂಡದಲ್ಲಿ ಕನಿಷ್ಠ 15 ವಿದ್ಯಾರ್ಥಿಗಳು ಇರಬೇಕು. ಚಲನಚಿತ್ರ ಜಾನಪದ ಹಾಡುಗಳು, ಅಶ್ಲೀಲ ಪದಗಳ ಬಳಕೆ, ಬೆಂಕಿ ಪ್ರದರ್ಶನ, ನೈಜ ಆಯುಧಗಳು ಹಾಗೂ ಪ್ರಾಣಿಗಳ ಪ್ರದರ್ಶನಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ. ಅಂತಿಮ ಹಂತದ ಸ್ಪರ್ಧೆಗಳು ಸಂಜೆ 5, 6 ಹಾಗೂ 7 ಗಂಟೆಗೆ ನಡೆಯಲಿದ್ದು, ಸಂಘಟಕರು ನೇಮಕ ಮಾಡಿದ ನಿರ್ಣಾಯಕರ ತೀರ್ಪೇ ಅಂತಿಮವಾಗಿರುತ್ತದೆ. ಪ್ರತಿ ವಿಭಾಗದ ಪ್ರತಿಯೊಂದು ಸ್ಪರ್ಧೆಗೆ ತಲಾ ಆರು ತಂಡಗಳು ಅಥವಾ ಆರು ಸ್ಪರ್ಧಾಳುಗಳನ್ನು ಅಂತಿಮ ಹಂತಕ್ಕೆ ಆಯ್ಕೆ ಮಾಡಲಾಗುತ್ತದೆ ಎಂದರು.
ಈ ಸ್ಪರ್ಧೆಯ ಉದ್ಘಾಟನೆ, ಬಹುಮಾನ ವಿತರಣಾ ಸಮಾರಂಭದಲ್ಲಿ  ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದೆ ಪ್ರಿಯಾಂಕ ಜಾರಕಿಹೊಳಿ ಸೇರಿದಂತೆ ಅನೇಕ ಮುಖಂಡರು ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಥಣಿ ತಾಲೂಕಿನ ವಿವಿಧ ಶಾಲಾ,  ಕಾಲೇಜಿನ ವಿದ್ಯಾರ್ಥಿಗಳು  ಈ ಸ್ಪರ್ಧೆಗೆ ಲಾಭ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
 ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ  ಅಸ್ಲo ನಾಲಬಂದ್, ಸಿದ್ದಾರ್ಥ ಶಿಂಗೆ, ಸುರೇಶ್ ಗೌಡ ಪಾಟೀಲ, ರಾವಸಾಹೇಬ ಐಹೊಳೆ, ಬಸವರಾಜ ಬುಟಾಳಿ, ವಿಲನ ಯಾಳಮಲ್ಲೇ, ಶಿವಾನಂದ ಸೌದಗರ, ಸುನಿಲ ಸಂಕ, ಸಂಜು ತಳಕೇರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article