ಬೆಂಗಳೂರು (ನ.08): ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಶಾಸಕ ಸತೀಶ್ ಸೈಲ್‌ಗೆ ಬಂಧನ ಭೀತಿ ಎದುರಾಗಿದೆ. ನಿನ್ನೆ (ನವೆಂಬರ್ 8) ಅಕ್ರಮ ಅದಿರು ಸಾಗಾಣಿಕೆ ಪ್ರಕರಣದ ವಿಚಾರಣೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ನಲ್ಲಿ ನಡೆಯಿತು. ಈ ವೇಳೆ ವಿಚಾರಣೆ ಶಾಸಕ ಸತೀಶ್ ಸೈಲ್ (MLA Satish Sail) ಗೈರಾಗಿದ್ದರು. ಶಾಸಕನ ಜಾಮೀನು ಅರ್ಜಿ ವಜಾಗೊಳಿಸಿ ಜಡ್ಜ್ ಸಂತೋಷ್ ಗಜಾನನ ಭಟ್ ಆದೇಶ ಹೊರಡಿಸಿದ್ದು, ಸತೀಶ್ ಸೈಲ್ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಜಾರಿಯಾಗಿದೆ ಮತ್ತೆ ಶಾಸಕ ಜೈಲು ಪಾಲಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಕೋರ್ಟ್ ಹಾಜರಾಗದೇ ಸತೀಶ್ ಸೈಲ್ ವಿನಾಯಿತಿಗೆ ವಕೀಲರಿಂದ ಮನವಿ ಸಲ್ಲಿಸಿದ್ರು. ಆದ್ರೆ ಹಾಜರಾತಿಯಿಂದ ವಿನಾಯಿತಿ ನೀಡಲು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಕಾರ ತೋರಿದೆ. ಶಾಸಕನ ಜಾಮೀನು ಅರ್ಜಿವನ್ನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ವಜಾ ಮಾಡಿದೆ.
ಶಾಸಕನಿಗೆ ಜೈಲು ಪಾಲಾಗುವ ಭೀತಿ
ಅನಾರೋಗ್ಯ ಕಾರಣದಿಂದ ಮಧ್ಯಂತರ ಜಾಮೀನು ನೀಡಲಾಗಿತ್ತು. ಆರೋಗ್ಯ ಸಮಸ್ಯೆ ಹಾಗೂ ಚಿಕಿತ್ಸೆ ಕಾರಣದಿಂದ ಜಾಮೀನು ವಿಸ್ತರಿಸುವಂತೆ ಸೈಲ್ ಕೋರಿದ್ದ ಅರ್ಜಿಯನ್ನ ಪರಿಗಣಿಸಿದ ಜನಪ್ರತಿನಿಧಿಗಳ ನ್ಯಾಯಾಲಯ ನ.7 ರ ವರೆಗೆ ಜಾಮೀನು ವಿಸ್ತರಿಸಿ ಆದೇಶಿಸಿತ್ತು. ಇದೀಗ ಸೈಲ್ ಸಲ್ಲಿದ್ದ ಜಾಮೀನು ಅರ್ಜಿ ವಜಾಗೊಂಡಿದ್ದು, ಮತ್ತೆ ಜೈಲು ಪಾಲಾಗುವ ಭೀತಿ ಎದುರಾಗಿದೆ.


