ಉತ್ಸವಗಳಿಂದ ನಾಡಿನ ಕಲೆ- ಸಂಸ್ಕೃತಿಯ ಬೆಳಕು ಚೆಲ್ಲುವ ಕಾರ್ಯ : ಸತೀಶ್ ಜಾರಕಿಹೊಳಿ

Sandeep Malannavar
ಉತ್ಸವಗಳಿಂದ ನಾಡಿನ ಕಲೆ- ಸಂಸ್ಕೃತಿಯ ಬೆಳಕು ಚೆಲ್ಲುವ ಕಾರ್ಯ : ಸತೀಶ್ ಜಾರಕಿಹೊಳಿ
WhatsApp Group Join Now
Telegram Group Join Now
ಕುರುಗೋಡು ಉತ್ಸವಕ್ಕೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ವಿದ್ಯುಕ್ತ ಚಾಲನೆ
ಬಳ್ಳಾರಿ,ಫೆ.17 – ರಾಜ್ಯದಲ್ಲಿ ಹಮ್ಕಿಕೊಳ್ಳಲಾಗುತ್ತಿರುವ ಎಲ್ಲಾ ಉತ್ಸವಗಳ ಮೂಲಕ ನಾಡಿನ ಕಲೆ- ಸಂಸ್ಕೃತಿಗೆ ಪ್ರೋತ್ಸಾಹಿಸುವ ಕೆಲಸ, ಬೆಳಕು ಚೆಲ್ಲುವ ಕಾರ್ಯ ನಮ್ಮ ಸರ್ಕಾರ ಮಾಡುತ್ತಿದೆ ಎಂದು ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಕಂಪ್ಲಿ ರಸ್ತೆಯ ಶ್ರೀ ಖಾದರ್‌ಲಿಂಗ ದರ್ಗಾ ಹತ್ತಿರದ ಶ್ರೀ ದೊಡ್ಡ ಬಸವೇಶ್ವರ ವೇದಿಕೆಯಲ್ಲಿ ಆಯೋಜಿಸಲಾದ ಕುರುಗೋಡು ಉತ್ಸವಕ್ಕೆ ಸೋಮವಾರ ವಿದ್ಯುಕ್ತವಾಗಿ ಚಾಲನೆ ನೀಡಿ ಅವರು ಮಾತನಾಡಿದರು.
ನಾಡಿನ ಪ್ರಮುಖ ಉತ್ಸವಗಳಾದ ಹಂಪಿ ಉತ್ಸವ, ಕಿತ್ತೂರು ಉತ್ಸವ, ಸಂಗೊಳ್ಳಿ ರಾಯಣ್ಣ ಉತ್ಸವ, ಲಕ್ಕುಂಡಿ ಉತ್ಸವ ಮತ್ತು ಮೈಸೂರು ದಸರಾ ಮಹೋತ್ಸವದಂತೆ ಪ್ರಾಚೀನ ಐತಿಹ್ಯ ಹೊಂದಿರುವ ಈ ಭಾಗದ ಕುರುಗೋಡು- ಕಂಪ್ಲಿ ಉತ್ಸವಗಳು ಇತಿಹಾಸದ ಪುಟ ಸೇರಲಿ ಎಂದು ಆಶಿಸಿದರು.
ಕುರುಗೋಡು- ಕಂಪ್ಲಿ ಕ್ಷೇತ್ರಗಳಲ್ಲಿ ಹಲವಾರು ರೀತಿಯ ಸಾಮಾಜಿಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಇನ್ನಷ್ಟು ಕೆಲಸ ಮಾಡುವ ಅವಕಾಶ ಜನತೆ ನೀಡಬೇಕು ಎಂದರು.
ಸಂಸದ ಕೆ.ರಾಜಶೇಖರ ಬಸವರಾಜ ಹಿಟ್ನಾಳ್ ಅವರು ಮಾತನಾಡಿ, ಹಂಪಿಯಂತೆ ಕುರುಗೋಡು- ಕಂಪ್ಲಿ ಸ್ಥಳಗಳು ಐತಿಹಾಸಿಕ ಮಹತ್ವದ ಕುರುಹು ನೆಲೆ ಹೊಂದಿವೆ. ಈ ಸ್ಥಳಗಳ ಐತಿಹಾಸಿಕ ಚರಿತ್ರೆಯ ಮೇಲೆ ಬೆಳಕು ಚೆಲ್ಲುವ ಕಾರ್ಯ ಉತ್ಸವಗಳ ಮೂಲಕ ಮಾಡಲಾಗುತ್ತಿದೆ ಎಂದು ಹೇಳಿದರು.
ಬಹುದಿನಗಳ ಬೇಡಿಕೆಯಾದ ಕಂಪ್ಲಿ- ಗಂಗಾವತಿ ತುಂಗಭದ್ರಾ ಸೇತುವೆಯು ಲೋಕೋಪಯೋಗಿ ಸಚಿವರ ಅಶ್ವಾಸನೆಯಿಂದ 120 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಕ್ಕೆ ಅನುಮೋದನೆ ದೊರಕಿಸಿಕೊಂಡಿರುವುದು ಈ ಕ್ಷೇತ್ರದ ಶಾಸಕರ ಆಸಕ್ತಿ, ಕ್ರಿಯಾಶೀಲ ಕೆಲಸ ವ್ಯಕ್ತಿತ್ವ ಬಿಂಬಿಸುತ್ತಿದೆ ಎಂದರು.

ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಮಾತನಾಡಿ, ಎಲ್ಲಾ ಇಲಾಖೆಗಳ ಸಚಿವರನ್ನು ವಿಶ್ವಾಸಕ್ಕೆ ಪಡೆದು ರಾಜ್ಯದ 224 ಕ್ಷೇತ್ರಗಳಲ್ಲಿಯೇ ಅತಿಹೆಚ್ಚು ಅನುದಾನ ತಂದು ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಒತ್ತು ನೀಡುತ್ತಿರುವ ಶಾಸಕರೆಂದರೆ ಅದು ಜೆ.ಎನ್.ಗಣೇಶ್;ಈ ಭಾಗದಲ್ಲಿ ಅಭಿವೃದ್ಧಿಯ ಪರ್ವವೇ ನಡೆಯುತ್ತಿದೆ ಎಂದು ಹೇಳಿದರು.
ನಮ್ಮ ಕುಟುಂಬಕ್ಕೆ ರಾಜಕೀಯ ನೆಲೆ ನೀಡಿರುವುದು ಆಗಿನ ಈ ಕುರುಗೋಡು ಕ್ಷೇತ್ರ. ಇಲ್ಲಿ ನಮ್ಮ ತಂದೆಯೂ ಸಹ ಹಲವಾರು ರೀತಿಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದಾರೆ. ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಶಾಸಕ ಜೆ.ಎನ್.ಗಣೇಶ್ ಅವರು ಮಾಡುತ್ತಿದ್ದಾರೆ ಎಂದರು.
ಕಂಪ್ಲಿ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಹಕಾರ ಕೈಮಗ್ಗ ನೇಕಾರರ ಮಹಾಮಂಡಳಿ ನಿಯಮಿತ (ಕಾವೇರಿ ಹ್ಯಾಂಡ್‌ಲೂಮ್ಸ್) ದ ಅಧ್ಯಕ್ಷರೂ ಆಗಿರುವ ಜೆ.ಎನ್.ಗಣೇಶ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಿಂಧರ ನಾಡು ಕುರುಗೋಡು ಪಟ್ಟಣದ ಇತಿಹಾಸ ಈಗಿನ ಪೀಳಿಗೆಗೆ ತಿಳಿಯಪಡಿಸುವ ಕೆಲಸವಾಗಬೇಕು ಎಂಬುದು ಕ್ಷೇತ್ರದ ಜನರ ಬಹುದಿನಗಳ ಒತ್ತಾಸೆಯಾಗಿತ್ತು. ಸತತ ಮೂರು ತಿಂಗಳ ಪ್ರಯತ್ನದಿಂದ ಉತ್ಸವ ಆಯೋಜನೆಗೆ ಕಾಲ ಈಗ ಕೂಡಿಬಂದಿತು ಎಂದು ಹೇಳಿದರು.
ಕಂಪ್ಲಿ ಕ್ಷೇತ್ರದ ಕಂಪ್ಲಿ- ಕುರುಗೋಡು ಪಟ್ಟಣಗಳಲ್ಲಿ ಮಿನಿ ವಿಧಾನಸೌಧ, 100 ಹಾಸಿಗೆಯುಳ್ಳ ಆಸ್ಪತ್ರೆ, ತಾಲ್ಲೂಕು ಆಡಳಿತ ಕಚೇರಿ, ಪುರಸಭೆ ಕಚೇರಿ ಸೇರಿದಂತೆ ಎರಡೆರಡು ಕಟ್ಟಡಗಳು ನಿರ್ಮಾಣಗೊಂಡಿವೆ. ಅದೇರೀತಿಯಾಗಿ ಕುರುಗೋಡು ಪಟ್ಟಣದಲ್ಲಿ 2 ಲೇನ್ ರಸ್ತೆ, ಕುರುಗೋಡಿನ ಕೋಳೂರು ಕ್ರಾಸ್ ನಿಂದ ಕಂಪ್ಲಿಯವರೆಗೆ ಗುಂಡಿಮುಕ್ತ ರಸ್ತೆ ನಿರ್ಮಾಣ, ಶಾಲಾ-ಕಾಲೇಜುಗಳು, ವಸತಿನಿಲಯಗಳು ಸೇರಿದಂತೆ ಹಲವಾರು ರೀತಿಯ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದರು.
ರೈತರ ಸಮಸ್ಯೆ ಎಂದರೆ ಮಣಿಯುವ ಶಾಸಕನಲ್ಲ, ಹೇಳುವವನಲ್ಲ ಬದಲಾಗಿ ಕೆಲಸ ಮಾಡಿ ತೋರಿಸುವವ ನಾನು. ಕ್ಷೇತ್ರದ ಜನತೆಯ ಪ್ರೀತಿ ವಿಶ್ವಾಸದಿಂದ ಎರಡು ಬಾರಿ ಶಾಸಕನಾಗಲು ಅವಕಾಶ ನೀಡಿದ್ದೀರಿ; ಮುಂಬರುವ ದಿನಗಳಲ್ಲಿ ಇನ್ನಷ್ಟು ಸೇವೆ ಮಾಡುವ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೂ ಮುನ್ನ ಸಮಾರಂಭದಲ್ಲಿ ಗಣ್ಯರು “ಕುರುಗೋಡು ಉತ್ಸವ ಐತಿಹಾಸಿಕ ದೇವಸ್ಥಾನಗಳ ದರ್ಶನ” ಪುಸ್ತಕ ಬಿಡುಗಡೆ ಮಾಡಿದರು.ಈ ವೇಳೆ ಬೆಳಗಾವಿ ಉತ್ತರ ಕ್ಷೇತ್ರ ಶಾಸಕ ಆಸೀಫ್ ಸೇಟ್, ಕಿತ್ತೂರು ಕ್ಷೇತ್ರ ಶಾಸಕ ಬಾಬಾ ಸಾಹೇಬ್ ಪಾಟೀಲ್, ಕುರುಗೋಡು ಪುರಸಭೆ ಅಧ್ಯಕ್ಷ ಟಿ.ಶೇಖಣ್ಣ, ಬಳ್ಳಾರಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ, ಕುರುಗೋಡು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಸವನಗೌಡ, ಪುರಸಭೆ ಉಪಾಧ್ಯಕ್ಷ ಚನ್ನಪಟ್ಟಣ ಮಲ್ಲಿಕಾರ್ಜುನ, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ., ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್.ಎನ್., ಸಹಾಯಕ ಆಯುಕ್ತ ರಾಜೇಶ್.ಹೆಚ್.ಡಿ., ಕುರುಗೋಡು ತಹಶೀಲ್ದಾರ ನರಸಪ್ಪ, ಕಂಪ್ಲಿ ತಹಶೀಲ್ದಾರ ಜೂಗಲ ಮಂಜುನಾಯ್ಕ, ಸಂಡೂರು ತಹಶೀಲ್ದಾರ ಅನಿಲ್ ಕುಮಾರ್ ಸೇರಿದಂತೆ ಪುರಸಭೆ ಸದಸ್ಯರು, ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಇದ್ದರು.
ಕಾರ್ಯಕ್ರಮದಲ್ಲಿ ಜೀ ಕನ್ನಡ ಸರಿಗಮಪ ಸೀಸನ್ 20 ರ ವಿಜೇತೆ ಶಿವಾನಿ ಶಿವದಾಸ ಅವರು ಡಾ.ಬಿ.ಆರ್. ಅಂಬೇಡ್ಕರ್ ಅವರ ಕ್ರಾಂತಿ ಗೀತೆ ಮೊಳಗಿಸಿದರು.
ಇದಕ್ಕೂ ಮುನ್ನ ವೇದಿಕೆಯಲ್ಲಿ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಬಳಿಕ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿಶೇಷ ಸಾಧಕರಿಗೆ ಸನ್ಮಾನಿಸಲಾಯಿತು.
ನಂತರ ಬೆಂಗಳೂರಿನ ಜೀ ಕನ್ನಡ ಕಾಮಿಡಿ ಕಿಲಾಡಿಗಳ ಪ್ರವೀಣ್ ಗಸ್ತಿ ತಂಡದಿಂದ ಹಾಸ್ಯ ಸಂಜೆ ಕಾರ್ಯಕ್ರಮ, ಬಳಿಕ ಖ್ಯಾತ ರ್ಯಾಪ್ ಗಾಯಕರಾದ ಆಲ್-ಓಕೆ, ಚಂದನಶೆಟ್ಟಿ ಸೇರಿದಂತೆ ಇತರೆ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ ನಡೆದವು.
WhatsApp Group Join Now
Telegram Group Join Now
Share This Article