ಸಂತ್ರಸ್ತೆ ಅಪಹರಣ ಪ್ರಕರಣದ ಎರಡನೇ ಆರೋಪಿ ಸತೀಶ್ ಬಾಬು ಎಸ್ಐಟಿ ಕಸ್ಟಡಿಗೆ

Ravi Talawar
ಸಂತ್ರಸ್ತೆ ಅಪಹರಣ ಪ್ರಕರಣದ ಎರಡನೇ ಆರೋಪಿ ಸತೀಶ್ ಬಾಬು ಎಸ್ಐಟಿ ಕಸ್ಟಡಿಗೆ
WhatsApp Group Join Now
Telegram Group Join Now

ಬೆಂಗಳೂರು06: ಅಶ್ಲೀಲ ವಿಡಿಯೋ ಸಂಬಂಧ ಸಂತ್ರಸ್ತ ಮಹಿಳೆ ಅಪಹರಣ ಆರೋಪ ಪ್ರಕರಣದ ಎರಡನೇ ಆರೋಪಿ ಸತೀಶ್ ಬಾಬುರನ್ನು ಮೇ 13 ರವರೆಗೂ ವಿಶೇಷ ತನಿಖಾ ತಂಡ (ಎಸ್ಐಟಿ)ದ ಕಸ್ಟಡಿಗೆ ನೀಡಿ, ನಗರದ 17 ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ.

”ಸತೀಶ್ ಬಾಬು ಪ್ರಕರಣದಲ್ಲಿ ಮುಖ್ಯವಾದ ಆರೋಪಿಯಾಗಿದ್ದು, ಅಪಹರಣಕ್ಕೊಳಗಾದ ಮಹಿಳೆಯನ್ನು ಕೆ.ಆರ್. ನಗರ, ಹೊಳೆನರಸೀಪುರ ಎಲ್ಲ ಕಡೆ ಸುತ್ತಾಡಿಸಿದ್ದಾನೆ. ಆಕೆಯನ್ನು ಎ-1 ಆರೋಪಿಯ ಬಳಿ ಬಿಟ್ಟಿದ್ದಾನೆ. ಆದ್ದರಿಂದ ಪ್ರಕರಣದಲ್ಲಿ ಯಾರ ಪಾತ್ರವಿದೆ ಎಂಬ ಸ್ಪಷ್ಟತೆಯ ಅಗತ್ಯ ಇರುವುದರಿಂದ 10 ದಿನಗಳ ಕಾಲ ಕಸ್ಟಡಿಗೆ ನೀಡಬೇಕು” ಎಂದು ಎಸ್ಐಟಿ ಪರ ವಕೀಲರಾದ ಬಿ.ಎನ್. ಜಗದೀಶ್ ಅವರು ವಾದ ಮಂಡಿಸಿದ್ದರು.

ಮತ್ತೊಂದೆಡೆ, ”ಕೆ.ಆರ್.ನಗರದಲ್ಲಿ ದಾಖಲಾಗಿದ್ದ ಪ್ರಕರಣವನ್ನು ಯಾವುದೇ ಮಾಹಿತಿ ನೀಡದೇ ಎಸ್ಐಟಿಗೆ ವರ್ಗಾಯಿಸಲಾಗಿದೆ. ಇದರಲ್ಲಿ ಕೆಲವು ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ” ಎಂದು ಸತೀಶ್ ಬಾಬು ಪರ ವಕೀಲ ಪ್ರಮೋದ್ ಅವರು ಆಕ್ಷೇಪಿಸಿದ್ದರು.

ಮಹಿಳೆಯನ್ನು ಅಪಹರಿಸಲಾಗಿದೆ ಎಂದು ಆಕೆಯ ಪುತ್ರ ಮೇ 2 ರಂದು ಪೊಲೀಸ್​​ ಠಾಣೆಯಲ್ಲಿ ದೂರು ನೀಡಿದ್ದರು. ಅದರ ಅನ್ವಯ ಸತೀಶ್ ಬಾಬುರನ್ನು ​ಪೊಲೀಸರು ಬಂಧಿಸಿದ್ದಾರೆ. ಬಳಿಕ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಎಸ್ಐಟಿಗೆ ವಹಿಸಲಾಗಿತ್ತು.

ಇದೇ ಪ್ರಕರಣ ಸಂಬಂಧ ಮಾಜಿ ಸಚಿವ ಹೆಚ್​.ಡಿ. ರೇವಣ್ಣ ಅವರನ್ನೂ ಕೂಡ ಎಸ್​ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ರೇವಣ್ಣ ಅವರನ್ನು ನ್ಯಾಯಾಲಯವು 4 ದಿನಗಳ ಕಾಲ ಎಸ್​ಐಟಿ ಕಸ್ಟಡಿಗೆ ನೀಡಿದೆ. ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

WhatsApp Group Join Now
Telegram Group Join Now
Share This Article