ಚನ್ನಪಟ್ಟಣ: ‘ಅಭಿನಯ ಸರಸ್ವತಿ’ ಬಿ. ಸರೋಜಾದೇವಿ ಸೋಮವಾರ ಮುಂಜಾನೆ ತಮ್ಮ 87ನೇ ವಯಸ್ಸಿನಲ್ಲಿ ಇಹಲೋಕದ ಪಯಣ ಮುಗಿಸಿದರು. ಇಂದು ಚನ್ನಪಟ್ಟಣ ತಾಲೂಕಿನ ದಶವಾರ ಗ್ರಾಮದಲ್ಲಿ ಅಂತಿಮ ವಿಧಿ-ವಿಧಾನಗಳು ನಡೆಯಲಿವೆ. ಮಲ್ಲೇಶ್ವರಂ ನಿವಾಸದಿಂದ ಚನ್ನಪಟ್ಟಣ ತಾಲೂಕಿನ ದಶವಾರ ಗ್ರಾಮಕ್ಕೆ ನಟಿಯ ಪಾರ್ಥಿವ ಶರೀರವನ್ನು ಸಾಗಿಸಲಾಗುತ್ತಿದೆ.
ಶಾಸಕ ಸಿ.ಪಿ. ಯೋಗೇಶ್ವರ್ ಸ್ಥಳ ಪರಿಶೀಲನೆ: ದಶವಾರ ಗ್ರಾಮದ ಹೊರವಲಯದಲ್ಲಿರುವ ನಟಿಯ ಮೆಚ್ಚಿನ ತೋಟದಲ್ಲಿ ಅಂತ್ಯಸಂಸ್ಕಾರ ಕಾರ್ಯಗಳು ನೆರವೇರಲಿವೆ. ತಾಯಿ ರುದ್ರಮ್ಮ ಸಮಾಧಿ ಪಕ್ಕದಲ್ಲೇ ನಟಿಯ ಅಂತಿಮ ವಿಧಿವಿಧಾನಗಳು ಜರುಗಲಿವೆ. ಈ ಹಿನ್ನೆಲೆ, ಶಾಸಕ ಸಿ.ಪಿ. ಯೋಗೇಶ್ವರ್ ಅವರು ಪೊಲೀಸ್ ಅಧಿಕಾರಿಗಳೊಂದಿಗೆ ಭೇಟಿ ಕೊಟ್ಟು ಸ್ಥಳ ಪರಿಶೀಲಿಸಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಚರ್ಚೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಇಂದು ಬೆಳಗ್ಗೆ ನಟಿಯ ಬೆಂಗಳೂರು ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಿಎಂ ಸಿದ್ದರಾಮಯ್ಯ, ನಟ ಗಣೇಶ್ ಸೇರಿದಂತೆ ಹಲವರು ಅಂತಿಮ ನಮನ ಸಲ್ಲಿಸಿದ್ದಾರೆ. ಇನ್ನೇನು ಕೆಲ ಹೊತ್ತಲ್ಲಿ ನಟಿ ಬಿ.ಸರೋಜಾ ದೇವಿ ಅವರ ಅಂತ್ಯಸಂಸ್ಕಾರ ನೆರವೇರಲಿದೆ.
ಅಭಿನಯ ಸರಸ್ವತಿ ಖ್ಯಾತಿಯ ಹಿರಿಯ ನಟಿ ಬಿ. ಸರೋಜಾ ದೇವಿ ಅವರ ಅಂತ್ಯಸಂಸ್ಕಾರ ಇಂದು ಅವರ ಹುಟ್ಟೂರಾದ ಚನ್ನಪಟ್ಟಣ ತಾಲೂಕಿನ ದಶವಾರ ಗ್ರಾಮದಲ್ಲಿ ನಡೆಯಲಿದೆ. ತಾಯಿಯ ಸಮಾಧಿ ಪಕ್ಕವೇ ಅಂತ್ಯಸಂಸ್ಕಾರ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಒಕ್ಕಲಿಗ ಸಮುದಾಯದ ಸಂಪ್ರದಾಯದಂತೆ ಅಂತ್ಯಸಂಸ್ಕಾರ: ಬಿ. ಸರೋಜಾ ದೇವಿ ಅವರ ಪ್ರೀತಿಯ ತೋಟದಲ್ಲಿನ ತಾಯಿ ಸಮಾಧಿಯ ಪಕ್ಕವೇ ನಟಿಯ ಅಂತಿಮ ವಿಧಿ-ವಿಧಾನಗಳು ನಡೆಯಲಿದ್ದು, ಬಹುತೇಕ ಕೆಲಸಗಳು ಪೂರ್ಣಗೊಂಡಿವೆ. ಒಕ್ಕಲಿಗ ಸಮುದಾಯದ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಲಿದೆ.