ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಶಾರದಹಳ್ಳಿಯ ಶ್ರೀ ಶಂಕ್ರಪ್ಪ.ವಿ.ಆಚಾರ್ಯ ಚಾರಿಟೇಬಲ್ ಟ್ರಸ್ಟ್ ಇವರ ವತಿಯಿಂದ ಅಕ್ಷತ್ತದಿಗೆ ಅಮಾವಾಸ್ಯೆಯ ನಿಮಿತ್ತ ಸುಕ್ಷೇತ್ರ ದೇವರ ಗೋನಾಲದ ಜಗದ್ಗುರು ಶ್ರೀ ಮೌನೇಶ್ವರ ದೇವಸ್ಥಾನದಲ್ಲಿ ಬುಧವಾರ ಜರುಗಿದ ಅಹೋರಾತ್ರಿ ಸಂಗೀತ ಕಾರ್ಯಕ್ರಮದಲ್ಲಿ ಸ್ವರ ಸಿರಿ ರಾಜ್ಯ ಪ್ರಶಸ್ತಿ ಪ್ರದಾನಮಾಡಲಾಯಿತು.
ಸತತ ಎಂಟು ತಿಂಗಳಿಂದ ಪ್ರತೀ ಅಮವಾಸ್ಯೆಯಂದು ಜಗದ್ಗುರು ಶ್ರೀ ಮೌನೇಶ್ವರ ಸಂಗೀತ ಸೇವಾ ಬಳಗ ಇವರ ವತಿಯಿಂದ ನಡೆಸಿಕೊಂಡು ಬಂದಿರುವ ಅಹೋರಾತ್ರಿ ಸಂಗೀತ ಕಾರ್ಯಕ್ರಮವು ಬುಧವಾರದ ಅಕ್ಷತ್ತದಿಗೆ ಅಮವಾಸ್ಯೆಯಂದು ತನ್ನ ಒಂಭತ್ತನೆಯ ಸರಣೀ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರೈಸಿತು.
ಕಾರ್ಯಕ್ರಮದ ಪ್ರಾರಂಭದಲ್ಲಿ ಶ್ರೀ ಶಂಕ್ರಪ್ಪ ವಿ. ಆಚಾರ್ಯ ಚಾರಿಟೇಬಲ್ ಟ್ರಸ್ಟ್ (ರಿ.) ಶಾರದಹಳ್ಳಿ ಇವರ ವತಿಯಿಂದ ಹೆಸರಾಂತ ಸಂಗೀತ ಕಲಾವಿದರಾದ ಶ್ರೀ ಬಸವರಾಜ ಎಂ. ಯಳಸಂಗಿ ಇವರಿಗೆ ಸ್ವರ ಸಿರಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಸಂತೋಷ ಎಂ. ಆಚಾರ್ಯ ರವರು ಸಂಗೀತವೆಂಬ ಉತ್ಕೃಷ್ಠ ಕಲೆಗೆ, ಕಲಾವಿದರಿಗೆ ಪ್ರೋತ್ಸಾಹ ಅಗತ್ಯವಾಗಿದೆ. ಆ ನಿಟ್ಟಿನಲ್ಲಿ ಶಂಕ್ರಪ್ಪ.ವಿ.ಆಚಾರ್ಯ ಚಾರಿಟೇಬಲ್ ಟ್ರಸ್ಟ್ ಸಂಗೀತ ಕಲೆಯನ್ನು ಉಳಿಸಿ, ಕಲಾವಿದರನ್ನು ಬೆಳೆಸುವ ಸದುದ್ಧೇಶದಿಂದ ಸ್ವರ ಸಿರಿ ರಾಜ್ಯ ಪ್ರಶಸ್ತಿಯನ್ನು ನೀಡಿ, ಕಲಾವಿದರನ್ನು ನಾಡಿಗೆ ಪರಿಚಯಿಸುವ ಕಾರ್ಯ ಗೈಯ್ಯುತ್ತಿದೆ ಎಂದು ತಿಳಿಸಿದರು.
ನಂತರ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಶಹಾಪುರ ನಗರದ ಶ್ರೀ ವಿಶ್ವಕರ್ಮ ಏಕದಂಡಿಗಿ ಮಠದ ಪ. ಪೂ. ಶ್ರೀ ಅಜೇಂದ್ರ ಮಹಾಸ್ವಾಮಿಗಳು, ಹಾಗೂ ಪ.ಪೂ. ಶ್ರೀ ವಿರುಪಾಕ್ಷ ಸ್ವಾಮಿಗಳು, ಆಧ್ಯಾತ್ಮದ ಕುರಿತು ತಿಳಿಸಿ, ಕಲಾವಿದರಿಗೆ ಪ್ರೋತ್ಸಾಹ ಅಗತ್ಯ, ಅಂಥಹ ಪ್ರೋತ್ಸಾಹವನ್ನು ಪ್ರಶಸ್ತಿ ನೀಡುವ ಮೂಲಕ ಎಲೆಮರೆಯ ಕಾಯಿಯಂತಿರುವ ಕಲಾವಿದರನ್ನು ಮುನ್ನೆಲೆಗೆ ತರುವ ಕಾರ್ಯ ಶ್ರೀ ಶಂಕ್ರಪ್ಪ.ವಿ.ಆಚಾರ್ಯ ಚಾರಿಟೇಬಲ್ ಟ್ರಸ್ಟ್ ಮಾಡುತ್ತಿದೆ ಎಂದು ನುಡಿದು, ಈ ಕಾರ್ಯಕ್ರಮವು ಹೀಗೆ ಯಶಸ್ಸಿನ ಮೆಟ್ಟಿಲೇರಲಿ ಎಂದು ಆಶಿರ್ವಚನ ನೀಡಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಪೂ. ಶ್ರೀ ಲಿಂಗಯ್ಯ ಸ್ವಾಮಿಗಳು ಹಾಗೂ ಸಂಗೀತ ಕಲಾವಿದರು, ಸಮಾಜದ ಹಿರಿಯರು, ನಿರೂಪಕ ಬಾಲರಾಜ ಎಂ ವಿಶ್ವಕರ್ಮ ಅರಳಗುಂಡಗಿರವರು, ಯುವಕರು, ದೇವರ ಗೋನಾಲದ ಗ್ರಾಮಸ್ಥರು ಇನ್ನೀತರರು ಉಪಸ್ಥಿತರಿದ್ದರು.