ಸಂಸ್ಕಾರವು ಮನೆಯಿಂದಲೇ ಆರಂಭವಾಗಬೇಕು; ಸುಶಿಕ್ಷಿತರಲ್ಲಿ ನೈತಿಕತೆ ಅಗತ್ಯ: ಡಾ. ಗುರುರಾಜ್ ಕರಜಗಿ

Hasiru Kranti
ಸಂಸ್ಕಾರವು ಮನೆಯಿಂದಲೇ ಆರಂಭವಾಗಬೇಕು; ಸುಶಿಕ್ಷಿತರಲ್ಲಿ ನೈತಿಕತೆ ಅಗತ್ಯ: ಡಾ. ಗುರುರಾಜ್ ಕರಜಗಿ
WhatsApp Group Join Now
Telegram Group Join Now
ಬೆಳಗಾವಿ: “ಸಂಸ್ಕಾರ ಮತ್ತು ಮೌಲ್ಯಗಳು ಮನೆಯಿಂದಲೇ ಆರಂಭವಾಗಬೇಕು. ಶಿಕ್ಷಕರು ಮತ್ತು ಪಾಲಕರು ಒಗ್ಗೂಡಿ ಪ್ರಯತ್ನಿಸಿದರೆ ಮಾತ್ರ ಈ ಸಂಸ್ಕಾರಗಳು ಉಳಿಯಲು ಸಾಧ್ಯ. ಈ ಕಾರ್ಯವನ್ನು ಶಿಕ್ಷಣ ಸಂಸ್ಥೆಗಳು ಮಾಡಬೇಕಾಗಿದ್ದು, ಬಿ.ಕೆ. ಮಾಡೆಲ್ ಶಾಲೆಯು ಈ ನಿಟ್ಟಿನಲ್ಲಿ ಶ್ರಮಿಸುತ್ತಿರುವುದು ಸಂತಸದ ಸಂಗತಿ,” ಎಂದು ಖ್ಯಾತ ಶಿಕ್ಷಣ ತಜ್ಞ ಡಾ. ಗುರುರಾಜ್ ಕರಜಗಿ ಅವರು ಅಭಿಪ್ರಾಯಪಟ್ಟರು.

ಬಿ.ಕೆ. ಮಾಡೆಲ್ ಶಾಲೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸೋಮವಾರ ಸಂಜೆ ಮಾತನಾಡಿದ ಅವರು, “ವಿದ್ಯಾರ್ಥಿಗಳಿಗೆ ಕಲಿಸಿದ ಪಠ್ಯ ಜ್ಞಾನವು ಆರು ತಿಂಗಳಲ್ಲಿ ಮರೆತುಹೋಗಬಹುದು, ಆದರೆ ಅವರಿಗೆ ನೀಡಿದ ಸಂಸ್ಕಾರ ಮತ್ತು ಅನುಭವಗಳು ಜೀವನದ ಕೊನೆಯವರೆಗೂ ಉಳಿಯುತ್ತವೆ. ಶಾಲೆಗಳು ಮಕ್ಕಳಿಗೆ ಪೋಷಕರನ್ನು ಪ್ರೀತಿಸುವುದನ್ನು ಮತ್ತು ದೇಶದ ಬಗ್ಗೆ ಹೆಮ್ಮೆ ಪಡುವುದನ್ನು ಕಲಿಸಬೇಕು. ಇಂದು ಭಾಷೆ, ಜಾತಿ ಮತ್ತು ಲಿಂಗದ ಆಧಾರದ ಮೇಲೆ ದೇಶ ವಿಭಜನೆಯಾಗುತ್ತಿದೆ, ಅದನ್ನು ತಡೆಯುವ ಜವಾಬ್ದಾರಿ ಶಿಕ್ಷಕರ ಮೇಲಿದೆ,” ಎಂದರು.

ಮುಂದುವರಿದು ಮಾತನಾಡಿದ ಅವರು, “ದೇಶಕ್ಕೆ ಅನಕ್ಷರಸ್ಥರಿಗಿಂತ ಸುಶಿಕ್ಷಿತರಿಂದಲೇ ಹೆಚ್ಚಿನ ಹಾನಿಯಾಗಿದೆ. ರೋಗಿಯ ಕಿಡ್ನಿ ಕದಿಯುವವರು ಸುಶಿಕ್ಷಿತ ವೈದ್ಯರು, ಕಳಪೆ ರಸ್ತೆ ನಿರ್ಮಿಸುವವರು ಇಂಜಿನಿಯರ್‌ಗಳು ಮತ್ತು ಬ್ಯಾಂಕುಗಳನ್ನು ಲೂಟಿ ಮಾಡುವವರು ಸಾಕ್ಷರರೇ ಆಗಿದ್ದಾರೆ. ಇವರಿಗೆ ಬಾಲ್ಯದಲ್ಲೇ ಮೌಲ್ಯಾಧಾರಿತ ಶಿಕ್ಷಣ ಸಿಕ್ಕಿದ್ದರೆ ಇಂತಹ ತಪ್ಪುಗಳು ನಡೆಯುತ್ತಿರಲಿಲ್ಲ,” ಎಂದು ತಮ್ಮ ಜೀವನದ ಹಲವು ಉದಾಹರಣೆಗಳನ್ನು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸದ ಜಗದೀಶ್ ಶೆಟ್ಟರ್ ಮಾತನಾಡಿ, “ನಾನು ಅನೇಕ ಸಂಸ್ಥೆಗಳ ಶತಮಾನೋತ್ಸವದಲ್ಲಿ ಭಾಗವಹಿಸಿದ್ದೇನೆ, ಆದರೆ ಅವು ಎರಡು-ಮೂರು ದಿನಗಳ ಕಾರ್ಯಕ್ರಮಗಳಾಗಿರುತ್ತವೆ. ಬಿ.ಕೆ. ಮಾಡೆಲ್ ಶಾಲೆಯಲ್ಲಿ ಎಂಟು ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ವಿಶೇಷವಾಗಿದೆ,” ಎಂದರು. ಈ ಸಂಸ್ಥೆಯು ಗುರುರಾಜ್ ದೇಶಪಾಂಡೆ, ದೀಪಕ್ ಕರಂಜೀಕರ್, ವಿದ್ಯಾ ಮುರ್ಕುಂಬಿ ಅವರಂತಹ ಉದ್ಯಮಿಗಳನ್ನು ಹಾಗೂ ಅನೇಕ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಮತ್ತು ವಿಜ್ಞಾನಿಗಳನ್ನು ದೇಶಕ್ಕೆ ನೀಡಿದೆ. ಇದು ಇತರ ಸಂಸ್ಥೆಗಳಿಗೆ ಮಾದರಿಯಾದ ಶಾಲೆಯಾಗಿದೆ ಎಂದು ಅವರು ಶ್ಲಾಘಿಸಿದರು.

ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಎಸ್.ಎನ್. ಶಿವಣಗಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಅವಿನಾಶ್ ಪೋತದಾರ್ ಮತ್ತು ಶ್ರೀ ಎಸ್.ಎನ್. ಶಿವಣಗಿ ಅವರು ಗಣ್ಯರನ್ನು ಸನ್ಮಾನಿಸಿದರು.

WhatsApp Group Join Now
Telegram Group Join Now
Share This Article