ವಿಜಯಪುರ: ಪ್ರತಿಯೊಬ್ಬ ವಿದ್ಯಾರ್ಥಿಯು ಉತ್ತಮ ಬಾಳನ್ನು ರೂಪಿಸಿಕೊಳ್ಳಲು ನೈತಿಕ ಮೌಲ್ಯಗಳ ಅರಿವು-ಪಾಲನೆ ಅಗತ್ಯ. ಇಂದಿನ ಯುವವಿದ್ಯಾರ್ಥಿ ಸಮೂಹಕ್ಕೆ ಅಹಿಂಸೆ, ಪ್ರೀತಿ, ಏಕತೆಯಂತಹ ಮೌಲ್ಯಗಳು ಜೀವನ ಮಂತ್ರಗಳಾಗಬೇಕು ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.
ಅವರು ಸೋಮವಾರ ನಗರದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 2024-25 ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸಂಸ್ಕಾರ, ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳ ತಳಹದಿಯ ಮೇಲೆಯೇ ಭವ್ಯ ಭಾರತದ ಭವಿಷ್ಯ ನೆಲೆನಿಂತಿದೆ. ಹೀಗಾಗಿ, ಯುವ ಪೀಳಿಗೆಗೆ ಸಂಸ್ಕಾರದ ಶಿಕ್ಷಣ ನೀಡಬೇಕಾದದ್ದು ಅನಿವಾರ್ಯ. ಇಂದಿನ ಸ್ಪರ್ಧಾತ್ಮಕ ಮತ್ತು ಆಧುನಿಕ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ಜೀವನ ನಿರ್ವಹಣಾ ಕೌಶಲ್ಯ ಜ್ಞಾನ ಹೊಂದಬೇಕು ಎಂದು ಹೇಳಿದರು.
ಯಾಂತ್ರಿಕ ವಿಭಾಗದ ಹಿರಿಯ ಶ್ರೇಣಿಯ ಉಪನ್ಯಾಸಕ ಜಯರಾಮ ಎಸ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯೆ ವಿನಯ ಕಲಿಸುತ್ತದೆ, ವಿನಯ ಯೋಗ್ಯತೆಯನ್ನು ಹೆಚ್ಚಿಸುತ್ತದೆ. ಒಂದು ಉತ್ತಮ ಕನಸನ್ನು ನನಸು ಮಾಡಲು ನಿರಂತರ ಪರಿಶ್ರಮ ಅತಿ ಮುಖ್ಯ. ಉತ್ತಮ ಸ್ನೇಹಿತರ ಜೊತೆಗೂಡಿ, ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಬಸವರಾಜ ಪಾಟೀಲ ಮಾತನಾಡಿ, ಯುವವಿದ್ಯಾರ್ಥಿ ಪೀಳಿಗೆಗೆ ಪಾಶ್ಚಿಮಾತ್ಯ ರಾಷ್ಟ್ರಗಳ ಆದರ್ಶ, ಸಂಸ್ಕಾರಗಳು ಮಾದರಿಯಾಗುತ್ತಿರುವ ಈ ಸಂದರ್ಭದಲ್ಲಿ ಅವರ ಅಂತಃಕರಣವನ್ನು ತಲುಪಿ ದೇಸೀಯ ಚಿಂತನೆಯೆಡೆಗೆ ಸೆಳೆದೊಯ್ಯಬಲ್ಲ, ನಮ್ಮ ಪರಂಪರೆಯ ಶ್ರೇಷ್ಠತೆಯನ್ನು ಸಾರಿ ಹೇಳಬಲ್ಲ ಚಿಂತನೆ, ತತ್ವಗಳನ್ನು ತಿಳಿಪಡಿಸಬೇಕಿದೆ ಎಂದು ಹೇಳಿದರು.
ರಿಜಿಸ್ಟ್ರಾರ್ ಡಿ ಬಿ ಮಾಡಗಿ, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಎಸ್ ಎಸ್ ದೇಸಾಯಿ, ಇಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ಜಾನಪ್ಪ ಹೂಗಾರ, ವಿಜ್ಞಾನ ವಿಭಾಗದ ಸರೋಜಿನಿ ನಾಯಿಕ ಸೇರಿದಂತೆ ಕಾಲೇಜಿನ ಸರ್ವ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.