ಜಮಖಂಡಿ; ತಾಲೂಕಿನ ಅಡಿಹುಡಿ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಸಂಗಮೇಶ್ವರ ತೋಟದ ವಸತಿ ಶಾಲೆಗೆ ತೆರಳಲು ವಿದ್ಯಾರ್ಥಿಗಳು ಪರದಾಡುವಂಥಹ ಸ್ಥಿತಿ ನಿರ್ಮಾಣವಾಗಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಹಳ್ಳಬಂದು ರಸ್ತೆ ಬಂದ್ ಆಗುತ್ತಿದೆ, ಕಳೆದ 4 ವರ್ಷಗಳ ಹಿಂದೆಯೇ ಹಳ್ಳಕ್ಕೆ ಸೇತುವೆ ನಿರ್ಮಿಸಲು ಕಾಮಗಾರಿ ಪ್ರಾರಂಭಿಸಲಾಗಿತ್ತು ಆದರೆ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಸಂಗಮೇಶ್ವರ ಮಹರಾಜರ ದೇವಸ್ಥಾನ (ಕೆಳಗಿನ) ಸರ್ಕಾರಿ ಶುದ್ಧಕುಡಿಯುವ ನೀರಿನ ಘಟಕ, 70 ಮನೆಗಳು ಸುಮಾರು 300 ಎಕರೆ ಜಮೀನು ಇದೆ. ತೋಟದಲ್ಲಿ ವಾಸವಾಗಿರುವ ಕುಟುಂಬಗಳ ಸುಮಾರು ನೂರು ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ಸಂಚರಿಸಬೇಕು ರಸ್ತೆಯ ಎರಡು ತುದಿಗಳಲ್ಲಿ ಹಳ್ಳ ಬರುತ್ತದೆ. ಸಮಸ್ಯೆಯ ಕುರಿತು ಹಲವುಬಾರಿ ಡಿಸಿ, ಎಸಿ, ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಗಿದೆ ಯಾದರೂ ಯಾವುದೇ ಪ್ರಯೋಜನ ವಾಗಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು. ಗ್ರಾಪಂನ ಅಧಿಕಾರಿಗಳು ಸೇತುವೆ ನಿರ್ಮಾಣ ಕಾಮಗಾರಿ ನಮ್ಮ ಇಲಾಖೆಗೆ ಬರುವದಿಲ್ಲ ಪಿಡಬ್ಲೂಡಿ ಅಥವಾ ಆರ್‌ಡಿಪಿಆರ್‌ಗೆ ಕೇಳಬೇಕು ಎಂದು ಹೇಳುತ್ತಿದ್ದು ತೋಟದ ನಿವಾಸಿಗಳ ಗೋಳು ಕೇಳ ತೀರದಾಗಿದೆ. ಇಲ್ಲಿಯ ನಿವಾಸಿಗಳು ಹಗ್ಗದ ಸಹಾಯ ದಿಂದ ಅಥವಾ ಒಬ್ಬರನೊಬ್ಬರು ಕೈ ಹಿಡಿದು ಕೊಂಡು ಹಳ್ಳದಾಟಿ ತಮ್ಮ ನಿತ್ಯದ ಸಂಚಾರವನ್ನು ಮಾಡಬೇಕಾದ ಅನಿವಾರ್ಯತೆ ಇದೆ.
ಸೇತುವೆ ನಿರ್ಮಾಣ ಕಾಮಗಾರಿಗೆಂದು ಹಳ್ಳಕ್ಕೆ ಹಾಕಲಾಗಿದ್ದ ಪೈಪ್‌ಗಳನ್ನು ತೆರವುಗೊಳಿಸಿ, ರಸ್ತೆಯನ್ನು ಅಗೆಯಲಾಗಿತ್ತು, ಕಾಮಗಾರಿಯು ಅರ್ಧಕ್ಕೆ ನಿಂತಿದ್ದರಿಂದ ಅಗೆದ ಜಾಗದಲ್ಲಿ ಗರಸು ಮಣ್ಣು ಹಾಕಲು ಮನವಿ ಸಲ್ಲಿಸಲಾಯಿತಾದರೂ ಪಿಡಿಓ ಆಗಲಿ ಇನ್ನಿತರ ಅಧಿಕಾರಿಗಳಾಗಲಿ ಕ್ಯಾರೇ ಎನ್ನಲಿಲ್ಲ ರೈತರ ಮನವಿಯನ್ನು ಪುರಸ್ಕರಿಸದ ಕಾರಣ, ಸ್ಥಳಿಯ ನಿವಾಸಿಗಳು ತಮ್ಮ ಸ್ವಂತ ಕರ್ಚಿನಲ್ಲಿ ಅಗೆದ ಜಾಗದಲ್ಲಿ ಮಣ್ಣು ಗರಸು ತುಂಬಿಸಿಕೊಂಡು ತಾತ್ಕಾಲಿಕ ಸಂಚಾರಕ್ಕೆ ಅನುಕೂಲ ಮಾಡಿಕೊಂಡಿದ್ದರು. ಸೋಮವಾರ ದಿಂದ ಸುರಿದ ಭಾರಿ ಮಳೆಯಿಂದಾಗಿ ಹಳ್ಳ ತುಂಬಿ ಹರಿಯುತ್ತಿದ್ದು ರೈತರು ಹಾಕಿಕೊಂಡಿದ್ದ ಮಣ್ಣು ಕೊಚ್ಚಿಹೋಗಿ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಇನ್ನಾದರೂ ಅಧಿಕಾರಿಗಳು ಗಮನ ಹರಿಸಬೇಕೆಂದು ನಿವಾಸಿಗಳು ಮನವಿ ಮಾಡಿದ್ದಾರೆ. ಅನಾಹುತಗಳು ಸಂಭವಿಸದರೇ ಅದಕ್ಕೆ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಶಂಭು ಚೌಹಾಣ, ಮಲ್ಲಪ್ಪ ಚೌಹಾಣ, ರಾಮಪ್ಪ ದತ್ತುಬಾಗೊಳ, ಮುತ್ತಪ್ಪ ಚೌಹಾಣ, ಶಂಕರ ಕುಂಬಾರ, ಶ್ರೀಶೈಲ ಬಳಗಾರ, ಬಾಹುರಾಜ ನಾವಿ, ಗೊಪಾಲ ಬಳಗಾರ ಮುಂತಾದವರಿದ್ದರು.