ಬಳ್ಳಾರಿ, ಅಕ್ಟೋಬರ್ 18: ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 13 ರಂದು ಉಪಚುನಾವಣೆ ನಡೆಯಲಿದೆ. ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಮೂರು ಕ್ಷೇತ್ರಗಳ ಉಪಚುನಾವಣೆ ವ್ಯಕ್ತಿ ಪ್ರತಿಷ್ಠೆಗೆ ಸಾಕ್ಷಿಯಾಗಲಿವೆ. ಅದರಲ್ಲಂತೂ ಸಂಡೂರು ವಿಧಾನಸಭಾ ಕ್ಷೇತ್ರ ಅಖಾಡ ರಂಗೇರಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದೆ.
ಮಾಜಿ ಸಚಿವರಾದ ಜನಾರ್ದನ ರೆಡ್ಡಿ, ಶ್ರೀರಾಮುಲು ಮತ್ತು ಬಿ ನಾಗೇಂದ್ರ ಸಂಡೂರು ಉಪಚುನಾವಣೆಯನ್ನು ವರ್ಚಸ್ಸಾಗಿ ತೆಗೆದುಕೊಂಡಿದ್ದಾರೆ. ಕಳೆದ ವಿಧಾಸನಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಶ್ರೀರಾಮುಲು ಅವರಿಗೆ ಸೋಲಾಗಿತ್ತು. ಈ ಸೋಲಿನಿಂದ ಶ್ರೀರಾಮುಲುಗೆ ಮುಖಭಂಗವಾಗಿದೆ. ಈ ಸೋಲಿನ ಸೇಡನ್ನು ತೇರಿಸಿಕೊಳ್ಳಲು ಶ್ರೀರಾಮುಲು ಹವಣಿಸುತ್ತಿದ್ದಾರೆ. ಹೀಗಾಗಿ ಶ್ರೀರಾಮುಲು ಅವರಿಗೆ ಸಂಡೂರು ಕ್ಷೇತ್ರದಿಂದ ಸ್ಪರ್ಧಿಸುವ ಇಚ್ಚೆ ಇದೆ ಎಂದು ಹೇಳಲಾಗುತ್ತಿದೆ.
ಆದರೆ, ಆಪ್ತ ಸ್ನೇಹಿತನಾದ ಜನಾರ್ಧನ ರೆಡ್ಡಿ ಬೆಂಬಲ ಸಿಗುತ್ತಾ ಕಾದು ನೋಡಬೇಕಿದೆ. ಹೌದು, ಜನಾರ್ಧನ ರೆಡ್ಡಿ ಬಿಜೆಪಿ ಸೇರಿ, ಶ್ರೀರಾಮುಲು ಜೊತೆ ಮತ್ತೆ ಹಳೇ ದೋಸ್ತಿ ಮುಂದುವರೆಸುವ ಮಾತುಗಳನ್ನು ಆಡಿದ್ದಾರೆ. ಆದರೆ, ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ನಡುವೆ ಎಲ್ಲವೂ ಸರಿ ಇಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ರೆಡ್ಡಿ ಶ್ರೀರಾಮುಲುಗೆ ಬೆಂಬಲ ನೀಡುತ್ತಾರಾ ಕಾದುನೋಡಬೇಕಿದೆ.