ನ್ಯೂಯಾರ್ಕ್: ಪಾಕಿಸ್ತಾನದ ಬ್ಯಾಲಿಸ್ಟಿಕ್ ಕ್ಷಿಪಣಿ ಯೋಜನೆಗೆ ಸಹಾಯ ಮಾಡಿದ್ದಕ್ಕಾಗಿ ಅಮೆರಿಕವು ಮೂರು ಚೀನೀ ಮತ್ತು ಒಂದು ಪಾಕಿಸ್ತಾನಿ ಕಂಪನಿ ಹಾಗೂ ಓರ್ವ ಚೀನಾದ ಪ್ರಜೆಯ ಮೇಲೆ ನಿರ್ಬಂಧಗಳನ್ನು ವಿಧಿಸಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ಗುರುವಾರ ಪ್ರಕಟಿಸಿದ್ದಾರೆ.
ಶಾಹೀನ್-3 ಮತ್ತು ಅಬಾಬೀಲ್ ಕ್ಷಿಪಣಿಗಳಲ್ಲಿ ಬಳಸಲಾಗುವ ದೊಡ್ಡ ವ್ಯಾಸದ ರಾಕೆಟ್ ಮೋಟರ್ಗಳನ್ನು ಪರೀಕ್ಷಿಸಲು ಅಗತ್ಯವಾದ ಉಪಕರಣಗಳನ್ನು ಪಡೆಯಲು ಪಾಕಿಸ್ತಾನದ ರಾಷ್ಟ್ರೀಯ ಅಭಿವೃದ್ಧಿ ಸಂಕೀರ್ಣ (ಎನ್ಡಿಸಿ) ದೊಂದಿಗೆ ಕೆಲಸ ಮಾಡಿದ್ದಕ್ಕಾಗಿ ಬೀಜಿಂಗ್ ರಿಸರ್ಚ್ ಇನ್ ಸ್ಟಿಟ್ಯೂಟ್ ಆಫ್ ಆಟೋಮೇಷನ್ ಫಾರ್ ಮೆಷಿನ್ ಬಿಲ್ಡಿಂಗ್ ಇಂಡಸ್ಟ್ರಿ (ಆರ್ಐಎಎಂಬಿ) ಸಂಸ್ಥೆಯ ಮೇಲೆ ನಿರ್ಬಂಧ ವಿಧಿಸಲಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಚೀನಾದ ಪ್ರಜೆ ಲುವೊ ಡೊಂಗ್ಮೆ (ಈತ ಸ್ಟೀಡ್ ಲುವೊ ಎಂಬ ಗುಪ್ತನಾಮ ಹೊಂದಿದ್ದಾನೆ) ಮತ್ತು ಪಾಕಿಸ್ತಾನ ಮೂಲದ ಇನ್ನೋವೇಟಿವ್ ಇಕ್ವಿಪ್ ಮೆಂಟ್ ಕಂಪನಿಗೆ ಸಹ ಇದೇ ಕಾರಣಗಳಿಗಾಗಿ ನಿಷೇಧ ಹೇರಲಾಗಿದೆ ಎಂದು ಅವರು ಹೇಳಿದರು.
ಯುಎಸ್ ಪ್ರಕಾರ, ಎನ್ಡಿಸಿ ದೀರ್ಘ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಯಾರಿಸುತ್ತಿದೆ. ಆದರೆ ಸಾಮೂಹಿಕ ವಿನಾಶಕಾರಿ ಶಸ್ತ್ರಾಸ್ತ್ರಗಳ ಪ್ರಸರಣ ಮತ್ತು ಅವುಗಳ ವಿತರಣಾ ಜಾಲಗಳನ್ನು ತಡೆಯಲು 2005 ರಿಂದ ಕಾರ್ಯನಿರ್ವಾಹಕ ಆದೇಶದ ಅಡಿಯಲ್ಲಿ ಆರ್ಐಎಎಂಬಿ ಮೇಲೆ ನಿರ್ಬಂಧ ವಿಧಿಸಲಾಗಿದೆ.