ಬೆಂಗಳೂರು,ಮಾರ್ಚ್ 10: ಕರ್ನಾಟಕದ ಎಲ್ಲ ಪುಣ್ಯ ಕ್ಷೇತ್ರಗಳ ನದಿ ತೀರದಲ್ಲಿ ಶಾಂಪು, ಸೋಪುಗಳ ಮಾರಾಟ ನಿಷೇಧಿಸಿ ಅರಣ್ಯ ಮತ್ತು ಪರಿಸರ ಇಲಾಖೆ ಆದೇಶ ಹೊರಡಿಸಿದೆ. ಪುಣ್ಯ ಕ್ಷೇತ್ರಗಳ ನದಿ ತೀರದಲ್ಲಿ ಸೋಪು, ಶಾಂಪು ಬಳಕೆ ಹೆಚ್ಚಾಗಿದ್ದು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಹೀಗಾಗಿ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಆದೇಶ ಹೊರಡಿಸಲಾಗಗಿದೆ ಎಂದು ಅರಣ್ಯ ಮತ್ತು ಪರಿಸರ ಇಲಾಖೆ ತಿಳಿಸಿದೆ. ನದಿ ದಡಗಳಲ್ಲಿ ಸೋಪು, ಶಾಂಪು ಮಾರಾಟ ಹಾಗೂ ಬಳಕೆ ಮಾಡದಂತೆ ಆದೇಶಿಸಲಾಗಿದೆ.
‘ರಾಜ್ಯದ ವಿವಿಧ ಪುಣ್ಯ ಕ್ಷೇತ್ರಗಳಲ್ಲಿ ನದಿ ತೀರ, ಕಲ್ಯಾಣಿ ಹಾಗೂ ಸ್ನಾನಘಟ್ಟಗಳಲ್ಲಿ ಭಕ್ತರು ಶ್ಯಾಂಪು, ನೋಪು ಬಳಸಿ ಸ್ನಾನ ಮಾಡಿ, ಉಳಿದ ಸೋಪಿನ ತುಂಡು ಮತ್ತು ಶ್ಯಾಂಪು ಪ್ಯಾಕೇಟ್ಗಳನ್ನು ಅಲ್ಲಿಯೇ ಬಿಟ್ಟು ಹೋಗುತ್ತಿರುವುದರಿಂದ ಇದೆಲ್ಲವೂ ನದಿ, ಕೊಳ, ಸರೋವರ ಸೇರಿ ನದಿಯ ನೀರಿನಲ್ಲೂ ನೊರೆ ಉಕ್ಕುತ್ತಿರುವುದು. ನೀರು ಕಲುಷಿತವಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.