ಬೆಂಗಳೂರು, ಮಾರ್ಚ್ 12: ಕಾಂಗ್ರೆಸ್ ಸರ್ಕಾರವು (Congress) ಗ್ಯಾರಂಟಿ (Guarantee Schemes) ಯೋಜನೆಗಳ ಅನುಷ್ಠಾನದ ಮೇಲ್ವಿಚಾರಣೆ ಸಮಿತಿಗಳನ್ನು ರದ್ದುಗೊಳಿಸಬೇಕೆಂದು ವಿರೋಧ ಪಕ್ಷದ ಶಾಸಕರು ಮಂಗಳವಾರ ವಿಧಾನಸಭೆಯಲ್ಲಿ ಆಗ್ರಹಿಸಿದರು. ಇದರಿಂದಾಗಿ ಕಲಾಪದಲ್ಲಿ ಕೋಲಾಹಲ ಉಂಟಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಮಧ್ಯಪ್ರವೇಶದ ಹೊರತಾಗಿಯೂ ವಿರೋಧ ಪಕ್ಷದ ನಾಯಕರು ಪಟ್ಟು ಸಡಿಲಿಸಲಿಲ್ಲ. ಈ ವಿಷಯವನ್ನು ಪ್ರಸ್ತಾಪಿಸಿದ ತುರುವೇಕೆರೆ ಜೆಡಿಎಸ್ ಶಾಸಕ ಎಂಟಿ ಕೃಷ್ಣಪ್ಪ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಸಮಿತಿಗಳ ಸದಸ್ಯರನ್ನಾಗಿ ಮಾಡಲಾದ ಕಾಂಗ್ರೆಸ್ ಕಾರ್ಯಕರ್ತರಿಗೆ ಸರ್ಕಾರ ಸಂಬಳ ನೀಡಿದೆ ಎಂದು ಆರೋಪಿಸಿದರು. ಈ ಸಮಿತಿಗಳ ಸದಸ್ಯರಿಗೆ ವೇತನ ನೀಡಲು ತೆರಿಗೆದಾರರ ಹಣವನ್ನು ಪೋಲು ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಅಧಿವೇಶನ ಪುನರಾರಂಭವಾದಾಗ, ವಿರೋಧ ಪಕ್ಷಗಳ ಶಾಸಕರು ಸ್ಪೀಕರ್ ಪೀಠದ ಬಳಿಗೆ ನುಗ್ಗಿ ಮತ್ತೆ ಧರಣಿ ನಡೆಸಿದರು. ಕಾಂಗ್ರೆಸ್ ಸರ್ಕಾರವು ತೆರಿಗೆದಾರರ ಹಣವನ್ನು ಲೂಟಿ ಮಾಡುತ್ತಿದೆ ಎಂದು ಆರೋಪಿಸಿದರು. ಮತ್ತೊಂದೆಡೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನವನ್ನು ವಿರೋಧ ಪಕ್ಷಗಳು ವಿರೋಧಿಸುತ್ತಿವೆ ಎಂದು ಕಾಂಗ್ರೆಸ್ ಶಾಸಕರು ಆರೋಪಿಸಿದರು. ಇದರಿಂದಾಗಿ ಸ್ಪೀಕರ್ ಸದನವನ್ನು ದಿನದ ಮಟ್ಟಿಗೆ ಮುಂದೂಡಿದರು.