ಬಳ್ಳಾರಿ:20. ಕಳೆದ 2 ವರ್ಷಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಕಿ.ಮೀ.ರಸ್ತೆ ನಿರ್ಮಾಣ ಮಾಡೋಕೆ ಆಗಿಲ್ಲ, ನಮ್ಮ ಅವಧಿಯಲ್ಲಿನ ನಾನಾ ಕಾಮಗಾರಿಗಳಿಗೆ ಚಾಲನೆ ನೀಡಿ ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ, ಹಗರಣಗಳೇ 2 ವರ್ಷದ ಕಾಂಗ್ರೆಸ್ ಸರ್ಕಾರದ ಸಾಧನೆ ಎಂದು ಕೆಎಂಎಫ್ ಮಾಜಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಅವರು ವಾಗ್ದಾಳಿ ನಡೆಸಿದರು.
ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಎಸ್ಸಿ, ಎಸ್ಟಿ ವರ್ಗದವರ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನವನ್ನು ಗ್ಯಾರಂಟಿ ಗಳಿಗೆ ಬಳಕೆ ಮಾಡಿ, ದಲಿತರಿಗೆ ಅನ್ಯಾಯ ಮಾಡಿದ ಕಾಂಗ್ರೆಸ್ ಸರ್ಕಾರ ಯಾವ ಪುರುಷಾರ್ಥಕ್ಕೆ ಸಾಧನಾ ಸಮಾವೇಶ ನಡೆಸುತ್ತಿದೆ, ಕೈ ನಾಯಕರಿಗೆ ನಾಚಿಕೆಯಾಗಬೇಕು. ನಾನಾ ಕಾಮಗಾರಿಗಳನ್ನು ನಿರ್ವಹಿಸಿದ ಗುತ್ತಿಗೆದಾರರಿಗೆ ಹಣ ನೀಡಲು ಸರ್ಕಾರಕ್ಕೆ ಆಗುತ್ತಿಲ್ಲ, ಸಿ.ಎಂ.ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಶೇ.60 ಪರ್ಸೆಂಟ್ ಸರ್ಕಾರ ಎಂದು ಕಿಡಿಕಾರಿದರು. ಬಿಜೆಪಿ ಅವಧಿಯಲ್ಲಿನ ಕೆಲಸಗಳಿಗೆ ಕಾಂಗ್ರೆಸ್ ನವರು ತಮ್ಮ ಲೆಬಲ್ ಹಚ್ಚಿ ಪ್ರಚಾರ ಪಡಿತಿದ್ದಾರೆ. ಹಾಲಿನಿಂದ ಹಿಡಿದು, ಆಲ್ಕೊಹಾಲ್ ವರೆಗೂ ದರಗಳು ಗಗನಕ್ಕೇರಿದೆ, ಬಸ್ ದರ ಹೆಚ್ಚಳ, ಬಿತ್ತನೆ ಬೀಜದ ದರಗಳು ಹೆಚ್ಚು ಮಾಡಿದ್ದು, ಸರ್ಕಾರಕ್ಕೆ ಎಲ್ಲ ವರ್ಗದ ಜನರು ನಿತ್ಯ ಹಿಡಿ ಶಾಪ ಹಾಕುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ವಾಲ್ಮೀಕಿ ಅಭಿವೃದ್ದಿ ನಿಗಮದ ಹಗರಣದಲ್ಲಿ ಸಿಲುಕಿದ್ದ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ, ಜಿಲ್ಲೆಯ ಉಸ್ತುವಾರಿಯನ್ನು ಜಮೀರ್ ಅಹ್ಮದ್ ಅವರಿಗೆ ವಹಿಸಿದ್ದು, ಇಲ್ಲಿವರೆಗೂ ಜಿಲ್ಲೆಗೆ ಕಾಲಿಟ್ಟಿಲ್ಲ, ಶೀಘ್ರದಲ್ಲೇ ಸಚಿವರು ಕಾಣೆಯಾಗಿದ್ದಾರೆ, ಇವರನ್ನು ಹುಡುಕಿ ಕೊಡಿ ಎಂದು ದೂರು ಸಲ್ಲಿಸಲಾಗುವುದು ಎಂದು ಎಚ್ಚರಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೊಕ ಅವರು ಮಾತನಾಡಿ, ಆಪರೇಶನ್ ಸಿಂಧೂರ ಯಶಸ್ವಿ ಹಿನ್ನೆಲೆ ಇಡಿ ಪ್ರಪಂಚವೇ ಭಾರತವನ್ನು ಹಾಗೂ ನಮ್ಮ ಸೈನಿಕರನ್ನು ಕೊಂಡಾಡುತ್ತಿದೆ, ಹೀಗಿರುವಾಗ ಕೈನಾಯಕರು ಅವಿವೇಕದ ಮಾತುಗಳು, ಅವಿವೇಕದ ಪ್ರಶ್ನೆಗಳನ್ನು ಮಾಡುತ್ತಿರುವುದು ಅತ್ಯಂತ ದುರಂತದ ಸಂಗತಿ, ನಮ್ಮ ಹೆಣ್ಣುಮಕ್ಕಳ ಸಿಂಧೂರ ಅಳಿಸಿದ ಉಗ್ರರಿಗೆ ತಕ್ಕ ಪಾಠ ಹಾಗೂ ಅವರ ನೆಲೆಗಳನ್ನು ದ್ವಂಸ ಮಾಡಿದರೆ, ಅವಿವೇಕದ ಪ್ರಶ್ನೆಗಳನ್ನು ಮಾಡುತ್ತಿದ್ದು, ಕಾಂಗ್ರೆಸ್ ನವರ ಮನಸ್ಥಿತಿ ಹೇಗಿದೆ ಎಂಬುದು ಜಗತ್ತಿಗೆ ತಿಳಿದಿದೆ. ಕೇವಲ 24 ನಿಮಿಷಗಳಲ್ಲೇ ನಮ್ಮ ಸೈನಿಕರು ಉಗ್ರರ ನೆಲೆಗಳನ್ನು ಉಡಿಸ್ ಮಾಡಿದ್ದು, ಇಡಿ ಪ್ರಪಂಚವೇ ಕೊಂಡಾಡುತ್ತಿದೆ ಎಂದರು.
ಕಳೆದ 2 ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆ ಶೂನ್ಯ, ಇವರು ಯಾವ ಪುರುಷಾರ್ಥಕ್ಕೆ ಸಾಧನಾ ಸಮಾವೇಶ ಹಮ್ಮಿಕೊಂಡಿದ್ದಾರೆ, ತಿಳಿಯದಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಈ ಸರ್ಕಾರವನ್ನು ಕಿತ್ತೊಗೆಯಲು ಜನರು ತುದಿಗಾಲ ಮೇಲೆ ನಿಂತಿದ್ದಾರೆ. ಭ್ರಷ್ಟಾಚಾರ ಮುಕ್ತ ಬಳ್ಳಾರಿ ಅಂದವರು, ಪ್ರತಿ ಹಂತದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಸರ್ಕಾರದ ಈ ಸಮಾವೇಶ ಶೂನ್ಯ ಸಮಾವೇಶ ಎಂದು ವಾಗ್ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಬಿಜೆಪಿ ವಕ್ತಾರ ಡಾ. ಬಿ.ಕೆ.ಸುಂದರ್, ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎಸ್.ಗುರುಲಿಂಗನ ಗೌಡ್ರು, ಡಾ.ಅರುಣಾ, ಕೆ.ಆರ್.ಮಲ್ಲೇಶ್ ಕುಮಾರ್ ಇದ್ದರು.