ಜಮ್ಮು ಮತ್ತು ಕಾಶ್ಮೀರ, ಆಗಸ್ಟ್ 12: ಮೂವತ್ತೈದು ವರ್ಷಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಕಾಶ್ಮೀರಿ ಪಂಡಿತ್ ನರ್ಸ್ ಸರಳಾ ಭಟ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರ ಯಾಸಿನ್ ಮಲಿಕ್ ಮನೆ ಮೇಲೆ ವಿಶೇಷ ತನಿಖಾ ಸಂಸ್ಥೆ ಎಸ್ಐಎ ದಾಳಿ ನಡೆದಿದೆ. 1990 ರಲ್ಲಿ ನಡೆದ ಕಾಶ್ಮೀರಿ ಪಂಡಿತ್ ನರ್ಸ್ ಸರಳಾ ಭಟ್ ಅವರ ಹತ್ಯೆಗೆ ಸಂಬಂಧಿಸಿದಂತೆ ವಿಶೇಷ ತನಿಖಾ ಸಂಸ್ಥೆ (SIA) ಶ್ರೀನಗರದ 8 ಸ್ಥಳಗಳ ಮೇಲೆ ದಾಳಿ ನಡೆಸಿತು. ಈ ಸಂದರ್ಭದಲ್ಲಿ ಉಗ್ರ ಯಾಸಿನ್ ಮಲಿಕ್ ಮನೆ ಹಾಗೂ ಮಾಜಿ ಕಮಾಂಡರ್ಗಳ ಅಡಗುತಾಣಗಳ ಮೇಲೂ ದಾಳಿ ನಡೆಸಲಾಯಿತು.
ಶ್ರೀನಗರದ ಮೈಸುಮಾ ಪ್ರದೇಶದಲ್ಲಿರುವ ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂಟ್ನ ಮಾಜಿ ಮುಖ್ಯಸ್ಥ ಯಾಸಿನ್ ಮಲಿಕ್ ನಿವಾಸದ ಮೇಲೂ ದಾಳಿ ನಡೆದಿದೆ. 1990 ರ ದಶಕದ ಆರಂಭದಲ್ಲಿ ನರ್ಸ್ ಸರಳಾ ಭಟ್ ಅವರನ್ನು ಅಪಹರಿಸಲಾಗಿತ್ತು ಮತ್ತು ಮರುದಿನ ಶ್ರೀನಗರದ ಸೌರಾ ಪ್ರದೇಶದಿಂದ ಗುಂಡೇಟಿನಿಂದ ಛಿದ್ರಗೊಂಡ ಅವರ ದೇಹವು ಪತ್ತೆಯಾಗಿತ್ತು.