ಬೆಂಗಳೂರು: ಮಹಾರಾಷ್ಟ್ರದಲ್ಲಿ ನೋಂದಣಿಯಾದ ಕಾರನ್ನು ರಸ್ತೆ ಸಾರಿಗೆ ತೆರಿಗೆ ಪಾವತಿಸದೇ ಕರ್ನಾಟಕದಲ್ಲಿ ಬಳಸುತ್ತಿದ್ದ ಉದ್ಯಮಿ ಕೆಜಿಎಫ್ ಬಾಬು ಅವರಿಗೆ ಬೆಳ್ಳಂಬೆಳಗ್ಗೆ ಪ್ರಾದೇಶಿಕ ಸಾರಿಗೆ ಇಲಾಖೆ (RTO) ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.
ವಸಂತ ನಗರದಲ್ಲಿರುವ ಬಾಬು ಅವರ ನಿವಾಸದ ಮೇಲೆ ಆರ್‌ಟಿಒ ಜಂಟಿ ಆಯುಕ್ತರಾದ ಎಂ. ಶೋಭಾ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಟ್ಯಾಕ್ಸ್ ಪಾವತಿಸುವಂತೆ ಸೂಚಿಸಿ ತೆರಳಿದ್ದಾರೆ.
ಐಷಾರಾಮಿ ರೋಲ್ಸ್ ರಾಯ್ಸ್, ವೆಲ್ಫೈರ್ ಕಾರು, ಪೋಶೆ ಸೇರಿದಂತೆ ಹಲವು ಕಾರುಗಳ ಮಾಲೀಕರಾಗಿರುವ ಕೆಜಿಎಫ್ ಬಾಬು ಅವರು ಮುಂಬೈನಲ್ಲಿ ನೋಂದಣಿಯಾದ ಕಾರನ್ನು 1 ವರ್ಷಕ್ಕೂ ಅಧಿಕ ಸಮಯದಿಂದ ಬೆಂಗಳೂರಿನಲ್ಲಿ ಬಳಸುತ್ತಿದ್ದ ಹಿನ್ನೆಲೆ ದಾಳಿ ನಡೆಸಲಾಗಿದೆ.