ವಿಜಯಪುರ, ಫೆಬ್ರವರಿ 14: ಭೀಮಾತೀರದ ನಟೋರಿಯಸ್ ರೌಡಿ ಬಾಗಪ್ಪ ಹರಿಜನ ಹತ್ಯೆ ಪ್ರಕರಣ ವಿಜಯಪುರ ಪೊಲೀಸರು ಬೇಧಿಸಿದ್ದಾರೆ. ಗಾಂಧಿಚೌಕ ಠಾಣೆ ಪೊಲೀಸರು ಕೇವಲ 24 ಗಂಟೆಯಲ್ಲಿ ಪ್ರಕರಣದ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಪ್ರಕಾಶ ಅಲಿಯಾಸ್ ಪಿಂಟ್ಯಾ ಅಗರಖೇಡ್ ಸೇರಿ ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಾಗಪ್ಪ ಹರಿಜನ ಕೊಲೆ
ಫೆಬ್ರವರಿ 11 ರಾತ್ರಿ 9:45ರ ಸುಮಾರಿಗೆ ವಿಜಯಪುರದ ಮದೀನಾ ನಗರದಲ್ಲಿ ಭೀಮಾತೀರದ ಹಂತಕ ಬಾಗಪ್ಪ ಹರಿಜನ ಬರ್ಬರ ಕೊಲೆ ಮಾಡಲಾಗಿತ್ತು. ಆಟೋದಲ್ಲಿ ಬಂದಿದ್ದ ನಾಲ್ಕೈದು ಮಂದಿ, ಪಕ್ಕಾ ಪ್ಲ್ಯಾನ್ ಮಾಡಿ ಮಾರಕಾಸ್ತ್ರಗಳಿಂದ ಬಾಗಪ್ಪನ ತಲೆ, ಕೈಗೆ ಹಲ್ಲೆಗೈದು, ಎಡಗೈ ಮತ್ತು ಮುಂಗೈ ಕತ್ತರಿಸಿ ಮತ್ತು ಗುಂಡು ಹಾರಿಸಿ ಸಂಬಂಧಿಕರ ಎದುರೇ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿದ್ದರು. ಊಟ ಮಾಡಿ ವಾಕ್ ಮಾಡುತ್ತಿದ್ದಾಗಗಲೇ ಬಾಗಪ್ಪನನ್ನು ಕೊಲೆಗೈದು ಪರಾರಿಯಾಗಿದ್ದಾರೆ.
2024 ರ ಆಗಷ್ಟ 12 ರಂದು ರವಿ ಹತ್ಯೆಯಾಗಿತ್ತು. ವಿಜಯಪುರ ನಗರದ ಬಸವ ನಗರ ರಸ್ತೆಯ ಮೇಲೆ ಸ್ಕೂಟಿ ಮೇಲೆ ತೆರಳುತ್ತಿದ್ದ ರವಿ ಮೇಲೆ ಇನೋವಾ ಕಾರ್ ಹರಿಸಲಾಗಿತ್ತು. ಇನೋವಾ ಕಾರಿನ ಅಡಿಯಲ್ಲಿ ರವಿ ಶವ ಸಿಕ್ಕಿಹಾಕಿಕೊಂಡಿತ್ತು. ಶವವನ್ನು 2-3 ಕಿಮೀ ದೂರ ಎಳೆದುಕೊಂಡು ಹೋಗಿದ್ದ ಇನೋವಾ ಕಾರನಲ್ಲಿ ತುಳಸಿರಾಮ್ ಹರಿಜನ್ ಹಾಗೂ ಸಹಚರರಿದ್ದರು. ಈ ಪ್ರಕರಣದಲ್ಲಿ ತುಳಸಿರಾಮನಿಗೆ ಭಾಗಪ್ಪ ಹರಿಜನ್ ಬೆಂಬಲ ನೀಡಿದ್ದಾನೆ ಆರೋಪ ಕೇಳಿ ಬಂದಿತ್ತು. ಬಾಗಪ್ಪ ಹತ್ಯೆಯಾದ ಬಳಿಕ ರವಿ ಸಹೋದರ ಪ್ರಕಾಶ್ ಅಲಿಯಾಸ್ ಪಿಂಟ್ಯಾ ಅಣ್ಣನ ಆತ್ಮಕ್ಕೆ ಶಾಂತಿ ಸಿಕ್ಕಿತು ಎಂದು ಸ್ಟೇಟಸ್ ಹಾಕಿದ್ದನು ಎನ್ನಲಾಗಿದೆ.